ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ಯಾದಗಿರಿ ಘಟಕಕ್ಕೆ ಸೇರಿದ ಬಸ್ ಜಪ್ತಿ ಮಾಡಲಾಯಿತು. ಕೋರ್ಟ್ ಬೇಲಿಫ್ ಶಾಂತಪ್ಪ, ಮಾನಪ್ಪ, ಕಕ್ಷಿದಾರರ ಪರ ವಕೀಲ ಎಚ್.ವೀರಭದ್ರಪ್ಪ, ಶಿವಕುಮಾರ ಶೀಲವಂತ, ಮಲ್ಲಿಕಾರ್ಜುನ ಗೋನಾಳ, ರತ್ನಾಬಾಯಿ ಇದ್ದರು.
ಲಿಂಗಸುಗೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರನ ಕುಟುಂಬಕ್ಕೆ ನ್ಯಾಯಾಲಯ ಆದೇಶಿಸಿದರೂ ಪರಿಹಾರ ನೀಡದ ಕೆಕೆಆರ್‌ಟಿಸಿ ಬಸ್ಸನ್ನು ಬುಧವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿದರು.
ಮಸ್ಕಿ ತಾಲೂಕಿನ ಪಾಂಡುರಂಗ ಕ್ಯಾಂಪ್ ಬಳಿ 2001ರಲ್ಲಿ ಯಾದಗಿರಿ ಘಟಕಕ್ಕೆ ಸೇರಿದ ಸರ್ಕಾರಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಉಮೇಶ ಎನ್ನುವವರು ಸಾವಿಗೀಡಾಗಿದ್ದರು.
ಕುಟುಂಬದವರು ಪರಿಹಾರಕ್ಕಾಗಿ ಲಿಂಗಸುಗೂರು ಜೆಎಂಎಫ್‌ಸಿ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶರು 66,99,675 ರೂ. ಪರಿಹಾರ ಮೊತ್ತ, 8,37,450 ರೂ. ಬಡ್ಡಿ, 7525 ರೂ. ಇತರ ವೆಚ್ಚ ಸೇರಿ 75,44,650 ರೂ. ನೀಡಬೇಕೆಂದು ಸೂಚಿಸಿದ್ದರು. ಆದರೆ, ಕೆಕೆಆರ್‌ಟಿಸಿ ವಿಳಂಬ ಮಾಡಿದ್ದರಿಂದ ನ್ಯಾಯಾಲಯವು ಬಸ್ ಜಪ್ತಿ ವಾರೆಂಟ್ ಹೊರಡಿಸಿತ್ತು.
ಹೀಗಾಗಿ ಕೋರ್ಟ್ ಬೇಲಿಫ್ ಶಾಂತಪ್ಪ, ಮಾನಪ್ಪ ಬುಧವಾರ ಲಿಂಗಸುಗೂರು ಬಸ್ ನಿಲ್ದಾಣಕ್ಕೆ ಬಂದು ಯಾದಗಿರಿ ಘಟಕದ (ಕೆಎ 33 ಎಫ್ 0637) ಬಸ್ ವಶಪಡಿಸಿಕೊಂಡು ಲಿಂಗಸುಗೂರು ನ್ಯಾಯಾಲಯಕ್ಕೆ ಒಪ್ಪಿಸಿದರು.