ಹಟ್ಟಿ ಚಿನ್ನದ ಗಣಿ ಕಂಪನಿಗೆಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಗಣಿಯ ಭೂಗರ್ಭ ಭಾಗಕ್ಕೆ ಇಳಿದು ಪರಿಶೀಲಿಸಿದರು. 
ರಾಯಚೂರು

ಚಿನ್ನ ಉತ್ಪಾದನೆ ಹೆಚ್ಚಿಸಲು ಡಿಸಿಎಂ ಸೂಚನೆ

ಹಟ್ಟಿಚಿನ್ನದಗಣಿ: ಚಿನ್ನದಗಣಿ ಕಾರ್ಮಿಕರ ಸುರಕ್ಷತೆ ಹಾಗೂ ಕಲ್ಯಾಣಕ್ಕೆ ಆದ್ಯತೆ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಭಾನುವಾರ ಹಟ್ಟಿ ಚಿನ್ನದ ಗಣಿ ಕಂಪನಿಗೆ ಭೇಟಿ ನೀಡಿ ಗಣಿಯ ಭೂಗರ್ಭ ಭಾಗಕ್ಕೆ ಇಳಿದು ವೀಕ್ಷಣೆ ಮಾಡಿ ಮಾತನಾಡಿದರು. 
ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ತಾಂತ್ರಿಕ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಚಿನ್ನ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು. ಅಗತ್ಯವಿರುವ ಯಂತ್ರೋಪಕರಣ ಮತ್ತು ಕಾರ್ಮಿಕ ಸೌಲಭ್ಯಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಬೇಕು ಎಂದು ಚಿನ್ನದ ಗಣಿ ವ್ಯವಸ್ಥಾಪಕ ನಿರ್ದೇಶಕಿ ಶಿಲ್ಪಾ ಅವರಿಗೆ ಸೂಚಿಸಿದರು. 
ಗಣಿಯ ನ್ಯೂ ಸರ್ಕ್ಯೂಲರ್ ಶಾಫ್ಟ್‌ನಲ್ಲಿ ಸುಮಾರು 2600 ಮೀಟರ್ ಆಳಕ್ಕೆ ಇಳಿದ ಡಿಸಿಎಂ, ಚಿನ್ನದ ನಿಕ್ಷೇಪಗಳಿರುವ ಪ್ರದೇಶ ಪರಿಶೀಲಿಸಿದರು. ಗಣಿಯಲ್ಲಿ ನಡೆಯುತ್ತಿರುವ ಚಿನ್ನದ ಉತ್ಪಾದನಾ ಪ್ರಕ್ರಿಯೆ, ಕಾರ್ಮಿಕರ ಕಾರ್ಯಪದ್ಧತಿ ಹಾಗೂ ಮೂಲಸೌಕರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಚಿನ್ನದಗಣಿ ಕಂಪನಿಯ ಅಧ್ಯಕ್ಷ ಜೆ.ಟಿ ಪಾಟೀಲ್, ಸಚಿವ ಶಿವರಾಜ ತಂಗಡಗಿ, ಸಂಸದ ಕುಮಾರ ನಾಯಕ, ಜಿಲ್ಲಾಧಿಕಾರಿ ನಿತೀಶ್ ಕೆ., ಎಸಿ ಬಸವಣೆಪ್ಪ ಕಲಶೆಟ್ಟಿ, ತಹಸೀಲ್ದಾರ್ ಸತ್ಯಮ್ಮ, ಮಾಜಿ ಶಾಸಕ ಡಿ.ಎಸ್.ಹೂಲಗೇರಿ, ಗಣಿ ಕಂಪನಿ ಅಧಿಕಾರಿಗಳಾದ ಪ್ರಕಾಶ್ ಕೆ., ಅರುಣವ್ ಘೋಷ್, ಸಂತೋಷ ಕುಮಾರ್, ಸೈಫುಲ್‌ಖಾನ್, ಯಮನೂರಪ್ಪ ಇತರರಿದ್ದರು.