ರಾಯಚೂರಿನ ಇಂದಿರಾ ಕ್ಯಾಂಟಿನ್ ಅಡುಗೆ ಮನೆಯಲ್ಲಿ ಸಿಬ್ಬಂದಿಗಳು ಸೌದೆ ಒಲೆ ಮೇಲೆ ಅಡುಗೆ ತಯಾರು ಮಾಡುತ್ತಿರುವುದು.
ರಾಯಚೂರು ಇಸ್ರೇಲ್ ಮತ್ತು ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧದಿಂದಾಗಿ ಎಲ್ಪಿಜಿ ಸಿಲಿಂಡರ್ ಅಭಾವ ಹೆಚ್ಚಾಗಿದೆ. ಸಿಲಿಂಡರ್‌ಗಳ ಅಲಭ್ಯತೆಯ ಎಫೆಕ್ಟ್‌ನಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್‌ಗೂ ತಟ್ಟಿದೆ.
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸಿಲಿಂಡರ್ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಎದುರಾಗಬರದೆಂದು ಇಂದಿರಾ ಕ್ಯಾಂಟಿನ್ ಸಿಬ್ಬಂದಿಗಳು ಸೌದೆ ಒಲೆಯಲ್ಲಿಯೇ ಅಡುಗೆಯನ್ನು ಮಾಡುತ್ತಿದ್ದಾರೆ.
ನಗರದ 4 ಇಂದಿರಾ ಕ್ಯಾಂಟಿನ್‌ಗಳಿಗೆ ಅಡುಗೆ ತಯಾರಿಸಿ ಸರಬರಾಜು ಮಾಡುವ ಇಂದಿರಾ ಕ್ಯಾಂಟಿನ್ ಅಡುಗೆ ಮನಗೆ ವಾಣಿಜ್ಯ ಸಿಲೆಂಡರ್ ಸಮಸ್ಯೆ ಕಾಡುತ್ತಿದೆ. ಕ್ಯಾಂಟಿನ್ ಗುತ್ತಿಗೆದಾರರು ಸೌದೆ ಒಲೆ ಮೇಲೆ ಅಡುಗೆ ಮುಂದುವರೆಸಿದ್ದಾರೆ.
ಸಿಲೆಂಡರ್ ಸಮಸ್ಯೆಯಿಂದ ಮೆನು ಕಡಿತ ಮಾಡಿ ಇಡ್ಲಿ, ಚಪಾತಿಗೆ ಗುಡ್ ಬೈ ಹೇಳಿದ್ದು, ಕೇವಲ ಅನ್ನ-ಸಾಂಬಾರ್, ಉಪ್ಪಿಟ್ಟು, ರೈಸ್ ಬಾತ್ ಸೇರಿ ಉಳಿದ ಅಡುಗೆ ಸೌದೆ ಮೇಲೆ ಮಾಡಲಾಗುತ್ತಿದೆ. ಪ್ರತಿನಿತ್ಯ ಸುಮಾರು 2 ಸಾವಿರ ಜನರಿಗೆ ಊಟ, ಉಪಹಾರ ನೀಡುವ ಇಂದಿರಾ ಕ್ಯಾಂಟಿನ್‌ಗೆ ಸಿಲಿಂಡರ್ ಬಿಸಿ ತಟ್ಟಿದೆ. ಒಂದು ಗಂಟೆಯಲ್ಲಿ ಮುಗಿಯುವ ಅಡುಗೆ ಕೆಲಸ ಸಿಲಿಂಡರ್ ಸಮಸ್ಯೆಯಿಂದ ಸೌದೆ ಒಲೆಯ ಮೇಲೆ ಅಡುಗೆ ತಯಾರಿಸುತ್ತಿರುವುದರಿಂದ ಎರಡು ಗಂಟೆ ಆಗುತ್ತಿದೆ.
ಅದರಿಂದ ಅನ್ನ ಸಾಂಬರ್ ತಯಾರಿಕೆ ಪ್ರಮಾಣವನ್ನೂ ಕಡಿಮೆ ಮಾಡಲಾಗಿದ್ದು ಪಲಾವ್, ಚಿತ್ರಾನ್ನವನ್ನು ಕೊಡಲಾಗುತ್ತಿದೆ. ಪ್ರತಿನಿತ್ಯ ಎರಡು ವಾಣಿಜ್ಯ ಸಿಲೆಂಡರ್ ಅಗತ್ಯವಿದ್ದು, ಈಗ ಕಟ್ಟಿಗೆ ಸೌದೆಯಿಂದ ಕೆಲಸವೂ ಜಾಸ್ತಿ ಖರ್ಚು ಜಾಸ್ತಿ ಅಂತ ಕ್ಯಾಂಟಿನ್ ಗುತ್ತಿಗೆದಾರರು ಅಳಲು ತೋಡಿಕೊಂಡಿದ್ದಾರೆ.
ಇಂದಿರಾ ಕ್ಯಾಂಟೀನ್ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದರೂ, ನಿರ್ವಹಣೆ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದೆ. ಕಡಿಮೆ ಬೆಲೆಗೆ ಪೌಷ್ಟಿಕಾಂಶಯುಕ್ತ ಆಹಾರ ಒದಿಸುವ ಮೂಲಕ ಇದು ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳ ಪಾಲಿಗೆ ಸಂಜೀವಿನಿ ಎನಿಸಿಕೊಂಡಿದೆ.
ಸಮಯಕ್ಕೆ ಸರಿಯಾಗಿ ಸಿಲಿಂಡರ್ ಪೂರೈಕೆಯಾಗದಿದ್ದರೆ, ಕ್ಯಾಂಟೀನ್ ನಂಬಿಕೊಂಡಿರುವ ನೂರಾರು ಜನರಿಗೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಿಲಿಂಡರ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.