ಸಿಂಧನೂರಿನ ಗ್ಯಾಸ್ ಏಜೆನ್ಸಿ ಮುಂದೆ ಗುರುವಾರ ಸರದಿಯಲ್ಲಿ ಖಾಲಿ ಸಿಲಿಂಡರ್‌ಗಳನ್ನು ಇಟ್ಟಿರುವುದು ಕಂಡುಬಂತು. 
ರಾಯಚೂರು

ಗ್ಯಾಸ್ ಏಜೆನ್ಸಿ ಮುಂದೆ ಗ್ರಾಹಕರ ಸರದಿ

ಪ್ರಮುಖ ಮುಖ್ಯಾಂಶಗಳು

  • ಸಿಲಿಂಡರ್ ಪಡೆಯಲು ಪರದಾಟ
  • ಸಿಂಧನೂರು ಅಡುಗೆ ಅನಿಲ ಅಭಾವ
ಸಿಂಧನೂರು: ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ಅಡುಗೆ ಅನಿಲ ಸಿಲಿಂಡರ್‌ಗಳ ಅಭಾವ ಸೃಷ್ಟಿಯಾಗುತ್ತಿದ್ದು, ನಗರದ ಗ್ಯಾಸ್ ಸಿಲಿಂಡರ್ ಏಜೆನ್ಸಿ ಕಚೇರಿಗಳ ಮುಂದೆ ಜನರು ಸರದಿಯಲ್ಲಿ ನಿಲ್ಲುವಂತಾಗಿದೆ.
ನಗರದ ಬಪ್ಪೂರ ರಸ್ತೆ, ಕುಷ್ಟಗಿ ರಸ್ತೆ ಹಾಗೂ ಶಹರ ಪೊಲೀಸ್ ಸ್ಟೇಷನ್ ಪಕ್ಕದ ಗ್ಯಾಸ್ ಏಜೆನ್ಸಿ ಕಚೇರಿಗೆ ಗ್ರಾಹಕರು ಭೇಟಿ ನೀಡಿ, ಗ್ಯಾಸ್ ಸಿಲಿಂಡರ್‌ಗೆ ಬೇಡಿಕೆಯಿಡುತ್ತಿರುವುದು ಸಾಮಾನ್ಯವಾಗಿದೆ. ಅಲ್ಲದೆ, ಬುಕ್ಕಿಂಗ್ ಮಾಡಿಸಿ ಮೂರು ದಿನವಾಗಿದ್ದು, ಏಜೆನ್ಸಿ ಕಾರ್ಯಾಲಯಕ್ಕೆ ಅಲೆದಾಡುತ್ತಿದ್ದೇವೆ. ಆದರೆ, ಈವರೆಗೂ ಗ್ಯಾಸ್ ಸಿಲಿಂಡರ್ ದೊರೆತಿಲ್ಲ. ಇದರಿಂದ ಆಹಾರ ತಯಾರಿಕೆಗೆ ಸಮಸ್ಯೆಯಾಗಿದೆ. ಮನೆ ಕಾಂಪೌಂಡ್‌ನಲ್ಲಿ ಸೌದೆ ಒಲೆ ಹಚ್ಚಿ ಅನ್ನ ಮಾಡುವ ದುಸ್ಥಿತಿ ಎದುರಾಗಿದೆ ಎನ್ನುವುದು ಕೆಲ ಗ್ರಾಹಕರ ದೂರಾಗಿದೆ.
ಗೃಹ ಬಳಕೆ ಅಡುಗೆ ಅನಿಲ ವಿತರಕ ಏಜೆನ್ಸಿಗಳ ಕಾರ್ಯಾಲಯಕ್ಕೆ ಗ್ರಾಹಕರು ಮುಗಿಬಿದ್ದ ಹಿನ್ನೆಲೆಯಲ್ಲಿ ಬುಕ್ಕಿಂಗ್ ವೇಳೆ ಸರ್ವರ್ ಸಮಸ್ಯೆ ಎದುರಾಯಿತು. ಏಜೆನ್ಸಿಗಳ ಉದ್ಯೋಗಿಗಳು ಗ್ರಾಹಕರ ಸಂಖ್ಯೆ ನೋಂದಣಿ ಮಾಡಿ, ಮೊಬೈಲ್ ಒಟಿಪಿ ಪಡೆಯಬೇಕೆನ್ನುವಷ್ಟರಲ್ಲಿ ಸರ್ವರ್ ಕೈಕೊಡುತ್ತಿದೆ. ಇದರಿಂದ ತಾಸುಗಟ್ಟಲೇ ಕಾಯುವಂಥ ಸ್ಥಿತಿ ಎದುರಾಗಿದೆ.
ಈ ಹಿಂದೆ ಕೋವಿಡ್ ಲಾಕ್‌ಡೌನ್‌ನಲ್ಲಿ ಜನರು ತತ್ತರಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಕೂಡಲೇ ಜನರಿಗೆ ಅಗತ್ಯವಿರುವಷ್ಟು ಗ್ಯಾಸ್ ಸಿಲಿಂಡರ್ ಸಮರ್ಪಕವಾಗಿ, ಸುಲಭವಾಗಿ ಮತ್ತು ಪಾರದರ್ಶಕವಾಗಿ ವಿತರಿಸಬೇಕು. ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯೂ ಅಗತ್ಯ ಕ್ರಮವಹಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.