ಸಿರವಾರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೇಂದ್ರ ವಾಣಿಜ್ಯ ವಾಣಿಜ್ಯ ಇಲಾಖೆ ಜಂಟಿ ಕಾರ್ಯದರ್ಶಿ ಉಜ್ವಲ್ ಕುಮಾರ್ ಘೋಷ್, ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ ದಾಖಲೆಗಳನ್ನು ಪರಿಶೀಲಿಸಿದರು.
ಸಿರವಾರ: ಪಟ್ಟಣದ ಸಮುದಾಯ ಆರೋಗ್ಯ ಮತ್ತು ಅಂಗನವಾಡಿ ಕೇಂದ್ರಕ್ಕೆ ಕೇಂದ್ರ ವಾಣಿಜ್ಯ ಇಲಾಖೆ ಜಂಟಿ ಕಾರ್ಯದರ್ಶಿ ಉಜ್ವಲ್ ಕುಮಾರ್ ಘೋಷ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಮಾಹಿತಿ, ತಿಂಗಳಲ್ಲಿ ಎಷ್ಟು ಹೆರಿಗೆಗಳು ಆಗುತ್ತವೆ ಎಂದು ಮಾಹಿತಿ ಪಡೆದರು, ಗರ್ಭಿಣಿಯರ ಆರೋಗ್ಯದ ಸ್ಥಿರತೆ, ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ ಗರ್ಭಿಣಿಯರ ತಪಾಸಣೆ ಕಾರ್ಯವಿಧಾನ, ತಾಯಿಕಾರ್ಡ್‌ಗಳ ವಿವರ, ಹೆರಿಗೆ ಕೊಠಡಿ, ವಾರ್ಡ್, ಪ್ರಯೋಗಾಲಯ, ದಾಖಲಾತಿಗಳ ನಿರ್ವಹಣೆ ಪರಿಶೀಲಿಸಿದರು. ಆರೋಗ್ಯದ ಕುರಿತು ಗರ್ಭಿಣಿಯರಲ್ಲಿ ಜಾಗೃತಿ ಮೂಡಿಸಬೇಕೆಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
13 ಹಾಗೂ 23ನೇ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳ ಕುರಿತು ಮಾಹಿತಿ ಪಡೆದರು. 23ನೇ ಅಂಗನವಾಡಿ ಕೇಂದ್ರದಲ್ಲಿ ತೂಕ ಕಡಿಮೆ ಇರುವ ಮಗುವನ್ನು ಚಿಕಿತ್ಸೆಗೆ ಕಳಿಸುವಂತೆ ತಾಲೂಕು ವೈದ್ಯಾಧಿಕಾರಿ ಶರಣಬಸವಗೆ ಸೂಚಿಸಿದರು. ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಸಮರ್ಪಕವಾಗಿ ಪೌಷ್ಟಿಕ ಆಹಾರ ವಿತರಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಸೂಚಿಸಿದರು.
ಹರವಿ ಗ್ರಾಮದಲ್ಲಿ ವಿಬಿ ಜಿ ರಾಮ್ ಜಿ ಕಾಮಗಾರಿ ಪರಿಶೀಲಿಸಿ ಯೋಜನೆಯಡಿ ದೊರೆಯುವ ಸೌಲಭ್ಯಗಳ ಕುರಿತು ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಬೇಕೆಂದು ಕಾರ್ಮಿಕರು ಮನವಿ ಮಾಡಿದರು.
ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ, ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಡಿಎಚ್‌ಒ ಡಾ.ನಂದಿತಾ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ದೊರೆಸ್ವಾಮಿ, ಡಿಡಿಪಿಐ ಮಲ್ಲಿಕಾರ್ಜುನ, ತಾಪಂ ಇಒ ಮಂಜುನಾಥ ಜಾವೂರ, ಸಹಾಯಕ ನಿರ್ದೇಶಕ ಬಸವರಾಜ, ಸಿಡಿಪಿಒ ವಿರೂಪಾಕ್ಷಯ್ಯ ಸ್ವಾಮಿ ಇತರರಿದ್ದರು.