ನಾಗರಹಾಳ ಗ್ರಾಮದ ಜೈ ಮಾರುತಿ ಇಂಡಿಯನ್ ಗ್ಯಾಸ್ ವಿತರಣಾ ಕೇಂದ್ರಕ್ಕೆ ಗ್ರಾಹಕರು ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಬಸವರಾಜ, ರಾಜು, ದೊಡ್ಡಪ್ಪ, ಹನುಮಮ್ಮ, ರೇಣಮ್ಮ, ದುರುಗಮ್ಮ, ರುದ್ರಪ್ಪ ಅಂಗಡಿ, ಬಸನಗೌಡ ಇತರರಿದ್ದರು.
ಮುದಗಲ್: ಕೊಲ್ಲಿ ಯುದ್ಧ ಪರಿಣಾಮದಿಂದ ಅಡುಗೆ ಅನಿಲದ ಕೊರತೆಯನ್ನೇ ಬಂಡವಾಳ ಮಾಡಿಕೊಂಡು ಸಮೀಪದ ನಾಗರಹಾಳ ಗ್ರಾಮದ ಜೈ ಮಾರುತಿ ಇಂಡಿಯನ್ ಗ್ಯಾಸ್ ವಿತರಕರು ಕಾಳಸಂತೆಯಲ್ಲಿ ಸಿಲಿಂಡರ್‌ಗಳನ್ನು ಮಾರಾಟ ಮಾಡುತ್ತಿದ್ದಾರೆಂದು ಆರೋಪಿಸಿ ಗ್ರಾಹಕರು ಗುರುವಾರ ಸಂಜೆ ಗ್ಯಾಸ್ ವಿತರಣಾ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಮಧ್ಯಪ್ರಾಚ್ಯ ದೇಶಗಳ ನಡುವಿನ ಯುದ್ಧದ ಪರಿಣಾಮ ಎಲ್‌ಪಿಜಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇದರಿಂದ ಗ್ಯಾಸ್ ಮಾಲೀಕರು ಸಿಲಿಂಡರ್‌ಗಳ ಅಕ್ರಮ ದಾಸ್ತಾನು, ಕಾಳಸಂತೆಯಲ್ಲಿ ಅಧಿಕ ಬೆಲೆಗೆ ಮಾರಾಟ, ಗೃಹ ಬಳಕೆ ಸಿಲಿಂಡರ್‌ಗಳನ್ನು 2-3 ಸಾವಿರ ರೂ.ಗೆ ವ್ಯಾಣಿಜ್ಯ ಉದ್ದೇಶಕ್ಕಾಗಿ ಮಾರಾಟ ಮಾಡುತ್ತಿದ್ದಾರೆ. ಬುಕ್ ಮಾಡಿ ಹತ್ತಾರು ದಿನಗಳಾದರೂ ಗ್ಯಾಸ್ ನೀಡುತ್ತಿಲ್ಲ. ನಿತ್ಯ ಗ್ಯಾಸ್ ಕಚೇರಿಗೆ ಅಲೆದಾಡಿದರೂ ಕಂಪ್ಯೂಟರ್ ಕೆಟ್ಟಿದೆ, ಸರ್ವರ್ ಸಮಸ್ಯೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಗ್ರಾಹಕರ ಒಟಿಪಿ ದುರ್ಬಳಕೆ ಮಾಡಿಕೊಂಡು ಸಿಲಿಂಡರ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ಆಹಾರ, ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೃಹಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವ ಮತ್ತು ಕೃತಕ ಕೊರತೆ ಸೃಷ್ಟಿಸುತ್ತಿರುವುದು, ಬೀದಿಬದಿ ವ್ಯಾಪಾರಿಗಳು ಹಾಗೂ ಮದುವೆ ಮಂಟಪಗಳಲ್ಲಿ ಗೃಹಬಳಕೆ ಸಿಲೆಂಡರ್‌ಗಳನ್ನು ಮಾರಾಟ ಮಾಡುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸುತ್ತಲಿನ ಆಶಿಹಾಳ ತಾಂಡಾ, ಲೆಕ್ಕಿಹಾಳ, ಬೊಮ್ಮನಾಳ, ಹಲಕಾವಟಗಿ, ಸಜ್ಜಲಗುಡ್ಡ ಸೇರಿದಂತೆ ಇತರ ಗ್ರಾಮಗಳ ಜನರು ಆಗ್ರಹಿಸಿದರು. ಗ್ರಾಹಕರಾದ ಬಸವರಾಜ, ರಾಜು, ದೊಡ್ಡಪ್ಪ, ಹನುಮಮ್ಮ, ರೇಣಮ್ಮ, ದುರುಗಮ್ಮ, ರುದ್ರಪ್ಪ ಅಂಗಡಿ, ಬಸನಗೌಡ, ನಾಗರಾಜ, ಶಾರದಾ ಇತರರಿದ್ದರು.