ಸಿಂಧನೂರಿನಲ್ಲಿ ಗುರುವಾರ ಸಿಂಧನೂರು ಜಿಲ್ಲಾ ಕೇಂದ್ರವಾಗಿಸುವ ಹಿನ್ನೆಲೆಯಲ್ಲಿ ನಡೆದ ವಿವಿಧ ಸಂಘಟನೆಗಳ ಪೂರ್ವಭಾವಿ ಸಭೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಒಕ್ಕೂಟದ ತಾಲೂಕು ಅಧ್ಯಕ್ಷ ವೈ.ನರೇಂದ್ರನಾಥ ಮಾತನಾಡಿದರು. ಸಮಿತಿ ಸಂಚಾಲಕ ಡಾ.ಬಿ.ಎನ್.ಪಾಟೀಲ್, ಕಸಾಪ ಮಾಜಿ ತಾಲೂಕಾಧ್ಯಕ್ಷೆ ಸರಸ್ವತಿ ಪಾಟೀಲ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಅಮರಯ್ಯಸ್ವಾಮಿ ಅಲಬನೂರು ಇದ್ದರು.
- ಸಮಿತಿ ಸಂಚಾಲಕ ಡಾ.ಬಿ.ಎನ್.ಪಾಟೀಲ್ ಹೇಳಿಕೆ
- ಸಿಂಧನೂರಿನಲ್ಲಿ ಪೂರ್ವಭಾವಿ ಸಭೆ
ಸಿಂಧನೂರು: ಕೇವಲ ಭಾಷಣ, ಮನವಿಗಳಿಂದ ಜಿಲ್ಲಾ ಕೇಂದ್ರವಾಗಿಸುವುದು ಕಷ್ಟ. ಅದಕ್ಕಾಗಿ ನಾವೆಲ್ಲ ಸೇರಿಕೊಂಡು ನಿರಂತರ ಹೋರಾಟ ನಡೆಸುವ ಅಗತ್ಯವಿದೆ ಎಂದು ಸಿಂಧನೂರು ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಸಂಚಾಲಕ ಡಾ.ಬಿ.ಎನ್.ಪಾಟೀಲ್ ಹೇಳಿದರು.
ನಗರ ಟೌನ್‌ಹಾಲ್‌ನಲ್ಲಿ ಗುರುವಾರ ಸಿಂಧನೂರು ಜಿಲ್ಲಾ ಹೋರಾಟ ಸಮಿತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸಿಂಧನೂರು ಜಿಲ್ಲೆ ಆಗಲು ಮೂಲಸೌಕರ್ಯಗಳನ್ನು ಹೊಂದಿದೆ. ಆರ್ಥಿಕ, ಶೈಕ್ಷಣಿಕ, ಕೃಷಿ, ಸಾಮಾಜಿಕವಾಗಿ ಬಲಿಷ್ಠವಾಗಿದೆ. ಭೌಗೋಳಿಕವಾಗಿಯೂ ಅರ್ಹತೆ ಪಡೆದಿದೆ. ಪ್ರಾದೇಶಿಕ ಅಸಮತೋಲನ ತಪ್ಪಿಸುವ ದೃಷ್ಟಿಯಿಂದ ಸಿಂಧನೂರು ಜಿಲ್ಲೆಯಾಗಬೇಕು. ಹೋರಾಟಕ್ಕಾಗಿ ರೂಪುರೇಷೆ ರೂಪಿಸಲು ಅಭಿಪ್ರಾಯ ಪಡೆಯಲಾಗುತ್ತಿದೆ.
ಪಕ್ಷಾತೀತ, ಜಾತ್ಯಾತೀತ ಹೋರಾಟ ಅಗತ್ಯ. ತಾವರಗೇರಾ ತಾಲೂಕು ಕೇಂದ್ರಕ್ಕಾಗಿ ನಡೆಯುವ ಹೋರಾಟಕ್ಕೆ ನಾವು ಬೆಂಬಲಿಸೋಣ. ಕಾರಟಗಿ ಜನರ ಒಪ್ಪಿಸೋಣ. ಜತೆಗೆ ವಿವಿಧ ಸಂಘ-ಸಂಸ್ಥೆಗಳು ಸಂಬಂಧಿಸಿದವರಿಗೆ ಭೇಟಿ ಮಾಡಿ ಸಿಂಧನೂರಿಗೆ ಸೇರಬಹುದಾದ ತಾಲೂಕುಗಳ ಮನವೊಲಿಸಲು ಮುಂದಾಗಬೇಕು ಎಂದು ತಿಳಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಮಾಜಿ ಉಪಾಧ್ಯಕ್ಷ ರಾಜಶೇಖರ ಪಾಟೀಲ್ ಮಾತನಾಡಿ, ಜಿಲ್ಲಾ ಕೇಂದ್ರವಾಗಬೇಕೆಂದರೆ ಪ್ರತಿಯೊಬ್ಬರ ಗಟ್ಟಿ ಧ್ವನಿ ಅಗತ್ಯವಾಗಿದೆ. ಬೇರೆ ಬೇರೆ ತಾಲೂಕುಗಳ ಸೇರ್ಪಡೆ ಜತೆಗೆ ಈಗಿರುವ ಸಿಂಧನೂರು ತಾಲೂಕು ದೊಡ್ಡದಾಗಿದ್ದು, ಎರಡು ತಾಲೂಕುಗಳನ್ನು ಸೃಜಿಸಿ, ತುರ್ವಿಹಾಳ ತಾಲೂಕು ರಚನೆಗೆ ಪ್ರಸ್ತಾವನೆ ಸಲ್ಲಿಸುವುದರ ಜತೆಗೆ ಸಿಂಧನೂರು ಜಿಲ್ಲೆಯನ್ನಾಗಿಸಲು ಪ್ರಯತ್ನಿಸಬೇಕೆಂದು ಮನವಿ ಮಾಡಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಒಕ್ಕೂಟದ ತಾಲೂಕು ಅಧ್ಯಕ್ಷ ವೈ.ನರೇಂದ್ರನಾಥ, ಕಸಾಪ ಮಾಜಿ ತಾಲೂಕಾಧ್ಯಕ್ಷೆ ಸರಸ್ವತಿ ಪಾಟೀಲ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ಸೇರಿದಂತೆ ಅನೇಕರು ಅಭಿಪ್ರಾಯ ತಿಳಿಸಿದರು. ಸೈಯದ್ ಬಾಬರ್ ಪಾಷಾ ವಕೀಲ, ಎಚ್.ಎಫ್.ಮಸ್ಕಿ, ಅಮರಯ್ಯ ಸ್ವಾಮಿ, ಶರಣಪ್ಪ ಕೆ.ಗೋನಾಳ, ಹುಸೇನ್‌ಸಾಬ್, ತಿಮ್ಮಯ್ಯ ನಾಯಕ, ಅಶೋಕ ಉಮಲೂಟಿ, ಶ್ರೇಣಿಕ್‌ರಾಜ್ ಶೇಠ್, ಸಿದ್ರಾಮಪ್ಪ ಸಾಹುಕಾರ, ಪಂಪನಗೌಡ ತಾವರಗೇರಾ, ಶಾಂತಗೌಡ ಜಹಗೀರ್‌ದಾರ್ ಇದ್ದರು. ಸಭೆಯಲ್ಲಿ ಸಿಂಧನೂರು ಜಿಲ್ಲಾ ಕೇಂದ್ರವನ್ನಾಗಿಸಲು ಕಂಕಣಬದ್ಧರಾಗಿರಲು ನಿರ್ಧರಿಸಲಾಯಿತು.