ಮಾನ್ವಿ ಎಪಿಎಂಸಿ ಅವರಣದಲ್ಲಿ ಶುಕ್ರವಾರ ಹಮಾಲಿ ಕಾರ್ಮಿಕರಿಗೆ ನಿವೇಶನಗಳ ಹಕ್ಕುಪತ್ರಗಳನ್ನು ಸಚಿವ ಎನ್.ಎಸ್. ಬೋಸರಾಜು, ಶಾಸಕ ಹಂಪಯ್ಯ ನಾಯಕ ವಿತರಿಸಿದರು. ಎಪಿಎಂಸಿ ಆಡಳಿತಾಧಿಕಾರಿ ರವಿಚಂದ್ರ, ಕಾರ್ಯದರ್ಶಿ ರಂಗನಾಥ ದೇಸಾಯಿ ಇದ್ದರು.
- ಸಚಿವ ಎನ್.ಎಸ್. ಬೋಸರಾಜು ಹೇಳಿಕೆ
- ಮಾನ್ವಿಯಲ್ಲಿ ಹಮಾಲರಿಗೆ ಹಕ್ಕುಪತ್ರ ವಿತರಣೆ
ಮಾನ್ವಿ: ಹಮಾಲರಿಗೆ ನಿವೇಶನ ಹಕ್ಕುಪತ್ರ ನೀಡಲಾಗುತ್ತಿದ್ದು, ಕಾರ್ಮಿಕರ ಕಾಲನಿಯಲ್ಲಿ ಮೂಲ ಸೌಲಭ್ಯ ಒದಗಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು.
ಪಟ್ಟಣದ ಎಪಿಎಂಸಿ ಅವರಣದಲ್ಲಿ ಶುಕ್ರವಾರ ಎಪಿಎಂಸಿ ಹಮಾಲಿ ಕಾರ್ಮಿಕರಿಗೆ ಮಂಜೂರಾದ ನಿವೇಶನದ ಹಕ್ಕುಪತ್ರಗಳನ್ನು ವಿತರಿಸಿ ಮಾತನಾಡಿದರು.
2003ರಲ್ಲಿ ನಾನು ಶಾಸಕನಾಗಿದ್ದಾಗ ಮತ್ತು ಈಗಿನ ಶಾಸಕ ಹಂಪಯ್ಯ ನಾಯಕ ಅಂದು ಎಪಿಎಂಸಿ ಅಧ್ಯಕ್ಷರಾಗಿದ್ದ ವೇಳೆ ಕಾರ್ಮಿಕರ ನಿವೇಶನಕ್ಕಾಗಿ 2.23 ಎಕರೆ ಭೂಮಿ ಖರೀದಿಸಲಾಗಿತ್ತು. ನಂತರ 120 ನಿವೇಶನಗಳನ್ನು ರಚಿಸಲಾಗಿತ್ತು. ಆದರೆ, ಹಮಾಲರಿಗೆ ಪಟ್ಟಾ ನೀಡಲು ವಿಳಂಬವಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದ ನಂತರ ನ.20 ರಂದು ವಿವಿಧ ಷರತ್ತುಗಳಿಗೆ ಒಳಪಟ್ಟು 73 ಜನರಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಅಲ್ಲದೆ ಪುರಸಭೆಯಿಂದ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಕುಡಿವ ನೀರು, ಚರಂಡಿ, ರಸ್ತೆ ಸೇರಿದಂತೆ ಇತರ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಶಾಸಕ ಹಂಪಯ್ಯ ನಾಯಕ, ನಯೋಪ್ರಾ ಅಧ್ಯಕ್ಷ ಅಬ್ದುಲ್ ಗಫೂರ್‌ಸಾಬ್, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಬಿ.ಕೆ.ಅಮರೇಶಪ್ಪ, ಪ್ರಮುಖರಾದ ಕೆ. ಶಾಂತಪ್ಪ, ಎ.ಬಾಲಸ್ವಾಮಿ ಕೊಡ್ಲಿ, ಶರಣಯ್ಯ ನಾಯಕ ಗುಡದಿನ್ನಿ, ಸೈಯದ್ ಖಾಲೀದ್ ಖಾದ್ರಿ, ಕೆ.ಬಸವಂತಪ್ಪ, ರೌಡೂರು ಮಹಾಂತೇಶ ಸ್ವಾಮಿ, ರಾಜಾ ಸುಭಾಶ್ಚಂದ್ರ ನಾಯಕ, ಶಿವರಾಜ ವಕೀಲ, ಎಐಟಿಯುಸಿ ಸಂಯೋಜಿತ ಕಾರ್ಯಾಧ್ಯಕ್ಷ ಎಂ.ಬಿ.ಸಿದ್ದರಾಮಯ್ಯಸ್ವಾಮಿ, ಉದ್ಭವ ಆಂಜನೇಯ್ಯ ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷ ಹನುಮಂತ, ಎಪಿಎಂಸಿ ಆಡಳಿತಾಧಿಕಾರಿ ರವಿಚಂದ್ರ, ಕಾರ್ಯದರ್ಶಿ ರಂಗನಾಥ ದೇಸಾಯಿ ಇತರರಿದ್ದರು.