ದೇವದುರ್ಗ: ದೇವದುರ್ಗ ಹಾಗೂ ಅರಕೇರಾ ತಾಲೂಕು ವ್ಯಾಪ್ತಿಯಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ಮಾಡಿರುವ ಕಾಮಗಾರಿ ಕಳಪೆಯಿಂದ ಕೂಡಿದ್ದು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ನಿತೀಶ ಕೆ.ಗೆ ಜನಸಂಗ್ರಾಮ ಪರಿಷತ್ ವಿಭಾಗೀಯ ಕಾರ್ಯದರ್ಶಿ ಭೀಮರಾಯ ಜರದಬಂಡಿ ಮಂಗಳವಾರ ಮನವಿ ಸಲ್ಲಿಸಿದರು.
ಕೆಕೆಆರ್‌ಡಿಬಿ ಯೋಜನೆಯಲ್ಲಿ 100 ಕೋಟಿ ರೂ.ಗೂ ಹೆಚ್ಚು ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ನೀಡಲಾಗಿದೆ. ಈ ಸಂಸ್ಥೆ ತಾಲೂಕು ಸೇರಿ ಜಿಲ್ಲೆಯಲ್ಲಿ ವಿವಿಧೆಡೆ ಕೈಗೊಂಡ ಕಾಮಗಾರಿ ಅರೆಬರೆಯಾಗಿ ಮಾಡಿದೆ. ಹಲವು ಕಾಮಗಾರಿಗಳನ್ನು ಸಂಸ್ಥೆ ಜವಾಬ್ದಾರಿಯಿಂದ ನುಣುಚಿಕೊಂಡು ಸ್ಥಳೀಯ ಶಾಸಕರ ಒತ್ತಡದ ಮೇರೆಗೆ ನಿಯಮಬಾಹಿರವಾಗಿ ಹಿಂಬಾಲಕರಿಗೆ ಕಾಮಗಾರಿಗಳನ್ನು ಉಪಗುತ್ತಿಗೆ ನೀಡುತ್ತಿದೆ.
ಹೀಗಾಗಿ ಅಪೂರ್ಣ ಮತ್ತು ಕಳಪೆ ಕಾಮಗಾರಿಗಳ ಹಾವಳಿ ಹೆಚ್ಚಾಗಿದೆ. ತಾಲೂಕು ಕೇಂದ್ರಗಳಲ್ಲಿ ಕೆಆರ್‌ಐಡಿಎಲ್ ಸಂಸ್ಥೆ ಕಚೇರಿಗಳಿಲ್ಲ. ಇಂಜಿನಿಯರ್‌ಗಳು ಯಾವಾಗ ಬರುತ್ತಾರೋ, ಎಲ್ಲಿ ಕಾಮಗಾರಿಗಳ ವೀಕ್ಷಿಸುತ್ತಾರೋ ಗೊತ್ತಾಗಲ್ಲ. ಶೇ.45 ಪರ್ಸೆಂಟೇಜ್ ಮುರಿದು ಉಪಗುತ್ತಿಗೆದಾರರಿಗೆ ಹಣ ನೀಡುತ್ತಾರೆ ಎಂಬ ಆರೋಪವಿದೆ.
ಇದರಿಂದ ಕಾಮಗಾರಿ ಗುಣಮಟ್ಟ ಕಳೆದುಕೊಳ್ಳಲಿವೆ. ಇದಕ್ಕೆ ಎರಡ್ಮೂರು ವರ್ಷಗಳಲ್ಲಿ ಕೈಗೊಂಡ ಶಾಲೆ ಕಟ್ಟಡ, ರಸ್ತೆ, ಚರಂಡಿ, ಸಿಸಿ ರಸ್ತೆಗಳೇ ಉದಾಹರಣೆಯಾಗಿವೆ. ಇತ್ತೀಚೆಗೆ ನೀಡಿದ 100ಕೋಟಿ ರೂ.ಮೌಲ್ಯದ ಕಾಮಗಾರಿ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.