ದೇವದುರ್ಗ ತಾಲೂಕಿನ ಪರ್ತಾಪುರದಲ್ಲಿ ಆಲಿಕಲ್ಲು ಮಳೆಗೆ ಹಾನಿಯಾದ ಭತ್ತದ ಬೆಳೆಯನ್ನು ಶಾಸಕಿ ಕರೆಮ್ಮ ಜಿ.ನಾಯಕ ಪರಿಶೀಲಿಸಿದರು. ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ಕೃಷಿ ಇಲಾಖೆ ಎಡಿ ಶ್ರೀನಿವಾಸ್ ನಾಯಕ, ಮುಖಂಡರಾದ ಶರಣಪ್ಪ ಬಳೆ, ಬಸನಗೌಡ ದೇಸಾಯಿ, ಅಮರೇಶ ನಾಯಕ ಇತರರಿದ್ದರು. 
ರಾಯಚೂರು

ಬೆಳೆಹಾನಿ ಸಮೀಕ್ಷೆ ನಡೆಸಿ ವರದಿ ಕೊಡಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಶಾಸಕಿ ಕರೆಮ್ಮ ನಾಯಕ ಸೂಚನೆ
  • ದೇವದುರ್ಗ ವಿವಿಧೆಡೆ ರೈತರ ಜಮೀನಿಗೆ ಭೇಟಿ
ದೇವದುರ್ಗ: ಪಟ್ಟಣ ಸೇರಿ ತಾಲೂಕಾದ್ಯಂತ ಎರಡು ದಿನಗಳ ಹಿಂದೆ ಸುರಿದ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ರೈತರ ವಿವಿಧ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು, ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಬೆಳೆಹಾನಿ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕೆಂದು ಶಾಸಕಿ ಕರೆಮ್ಮ ಜಿ.ನಾಯಕ ಸೂಚಿಸಿದರು.
ಆಲಿಕಲ್ಲು ಮಳೆಯಿಂದ ಬೆಳೆಹಾನಿಯಾದ ಪರ್ತಾಪುರ, ಜರಬಂಡಿ, ಕೊಪ್ಪರ, ಜೋಳದಹೆಡಗಿ ಸೇರಿ ವಿವಿಧೆಡೆ ರೈತರ ಜಮೀನಿಗೆ ಶುಕ್ರವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಬೆಳೆಹಾನಿ ಪರಿಶೀಲಿಸಿ ಮಾತನಾಡಿದರು.
ಅಕಾಲಿಕ ಹಾಗೂ ಆಲಿಕಲ್ಲು ಮಳೆಯಿಂದ ಕಾಳುಕಟ್ಟಿದ ಭತ್ತ, ಸಜ್ಜೆ ಸಂಪೂರ್ಣ ಹಾನಿಯಾಗಿವೆ. ಇನ್ನು ಒಣಗಲು ಹಾಕಿದ್ದ ಮೆಣಸಿನಕಾಯಿ ಕೂಡ ಹಾಳಾಗಿದ್ದು, ರೈತರಿಗೆ ದೊಡ್ಡ ನಷ್ಟ ಉಂಟಾಗಿದೆ. ತಕ್ಷಣ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಜಂಟಿಯಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿ ಸಮಗ್ರ ವರದಿ ಸಿದ್ಧಪಡಿಸಬೇಕು. ಡಿಸಿಗೆ ತಕ್ಷಣ ವರದಿ ಕಳಿಸಿ ಕೊಡಬೇಕು. ಬೆಳೆನಷ್ಟ ಅನುಭವಿಸಿದ ರೈತರು ಯಾವುದೇ ಕಾರಣಕ್ಕೂ ಆತಂಕ ಪಡಬಾರದು. ರೈತರ ಸಮಸ್ಯೆಗಳು ಹಾಗೂ ಬೆಳೆಹಾನಿ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ ಸರ್ಕಾರದ ಮೇಲೆ ಒತ್ತಡ ಹಾಕಿ ಸೂಕ್ತ ಪರಿಹಾರ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.