ಲಿಂಗಸುಗೂರು ಸಮೀಪದ ನಾರಾಯಣಪುರ ಜಲಾಶಯ ಹತ್ತಿರದ ಇಂಟೆಕ್ ಕಂ ಜಾಕ್‌ವೆಲ್ ಕಾಮಗಾರಿಯನ್ನು ಸಂಸದ ಜಿ.ಕುಮಾರ ನಾಯಕ ವೀಕ್ಷಿಸಿ, ಅಧಿಕಾರಿಗೊಂದಿಗೆ ಚರ್ಚಿಸಿದರು. ಇಇ ಪ್ರಕಾಶ, ಗುಣಮಟ್ಟ ನಿಯಂತ್ರಣ ಇಂಜಿನಿಯರ್ ಶ್ರೀಧರ, ಎಇಇ ಪರಮೇಶ್ವರ ಟೆಂಗಳಿಕರ ಇತರರಿದ್ದರು.
- ಸಂಸದ ಜಿ.ಕುಮಾರ ನಾಯಕ ಸೂಚನೆ
- ನಾರಾಯಣಪುರ ಡ್ಯಾಂ ಹಿನ್ನೀರಿನಲ್ಲಿ ಜಾಕ್‌ವೆಲ್ ಕೆಲಸ ವೀಕ್ಷಣೆ
ಲಿಂಗಸುಗೂರು/ಮುದಗಲ್: ಕೇಂದ್ರ ಸರ್ಕಾರದ ಜಲಧಾರೆ ಯೋಜನೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಜನರಿಗೆ ಕುಡಿವ ನೀರು ಪೂರೈಕೆ ಮಾಡಬೇಕೆಂದು ಸಂಸದ ಜಿ.ಕುಮಾರ ನಾಯಕ ಅವರು, ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿರುವ ಜಲಧಾರೆ ಯೋಜನೆಯ ಇಂಟೆಕ್ ಕಂ ಜಾಕ್‌ವೆಲ್ ಕಾಮಗಾರಿ ಹಾಗೂ ನೀರು ಶುದ್ಧೀಕರಣ ಜಾಕ್‌ವೆಲ್‌ಗಳನ್ನು ಶುಕ್ರವಾರ ವೀಕ್ಷಿಸಿ ಮಾತನಾಡಿದರು. ಇದಕ್ಕೆ ಇಲಾಖೆಯ ಇಇ ಪ್ರಕಾಶ ಪ್ರತಿಕ್ರಿಯಿಸಿ, ಕಾಮಗಾರಿ ಪೂರ್ಣಗೊಳಿಸಲು ಜೂನ್‌ವರೆಗೆ ಕಾಲಾವಕಾಶವಿದೆ. ಮೂರು ಎಂಬಿಆರ್ ಕಾಮಗಾರಿಗಳಲ್ಲಿ ಒಂದನೇ ಎಂಬಿಆರ್ ಪೂರ್ಣಗೊಳಿಸಿ ಲಿಂಗಸುಗೂರು, ಮಸ್ಕಿ, ಸಿಂಧನೂರಿಗೆ ಪ್ರಾಯೋಗಿಕವಾಗಿ ನೀರೊದಗಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಾಮಗಾರಿ ವಿಳಂಬದ ಕಾರಣ, ಪ್ರಗತಿ ಸ್ಥಿತಿ ಹಾಗೂ ತಾಂತ್ರಿಕ ಅಡೆತಡೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಂಸದರು, ಈ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ನಂತರ ಸಂಸದ ಕುಮಾರ ನಾಯಕ ಅಧಿಕಾರಿಗಳೊಂದಿಗೆ ರಾಂಪುರ ಜಲಜೀವನ ಮಿಷನ್ ಕಾಮಗಾರಿ ಪರಿಶೀಲಿಸಿದರು. ಎಪಿಎಂಸಿ ಅಧ್ಯಕ್ಷ ಅಮರೇಶ ಹಿರೇಹೆಸರೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಪ್ರಮುಖರಾದ ಡಾ.ಶಿವಬಸಪ್ಪ ಹೆಸರೂರು, ಮುದಕಪ್ಪ ವಕೀಲ, ಎಸ್.ಆರ್.ರಸೂಲ್, ಆದನಗೌಡ ಬುಂಕಲದೊಡ್ಡಿ, ನಾಗರೆಡ್ಡೆಪ್ಪ, ವಿಶ್ವಕ್ರಾಂತಿ, ಮಹ್ಮದ್ ರಫಿ ಇತರರಿದ್ದರು.
ಚುನಾವಣೆ ನಂತ್ರ ಈಗ ಬಂದೀರಿ: ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಇದೇ ಪ್ರಥಮ ಬಾರಿಗೆ ಲಿಂಗಸುಗೂರು ತಾಲೂಕಿನ ಆನೆಹೊಸೂರು ಗ್ರಾಮಕ್ಕೆ ಸಂಸದ ಕುಮಾರನಾಯಕ ಶುಕ್ರವಾರ ಭೇಟಿ ನೀಡುತ್ತಿದ್ದಂತೆ ಗ್ರಾಮಸ್ಥರು, ಚುನಾವಣೆ ಪ್ರಚಾರಕ್ಕೆ ಬಂದವರು ಮತ್ತೆ ಈಗ ಬಂದೀರಿ, ಬನ್ನಿ ಎಂದು ವ್ಯಂಗ್ಯವಾಡುತ್ತಲೇ ಸ್ವಾಗತಿಸಿದರು. ಗ್ರಾಮಕ್ಕೆ ಬಹುದಿನಗಳಿಂದ ಶಾದಿಮಹಲ್ ನಿರ್ಮಾಣಕ್ಕ ಅನುದಾನ ಮತ್ತು ಇತರ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ: ಮುದಗಲ್: ಪಟ್ಟಣದ ಪುರಸಭೆ ಕಚೇರಿಗೆ ಸಂಸದ ಜಿ.ಕುಮಾರನಾಯಕ ಶುಕ್ರವಾರ ಭೇಟಿ ನೀಡಿ, ಕುಡಿವ ನೀರಿನ ಸಮಸ್ಯೆ ಹಾಗೂ ಶಾಶ್ವತ ಕುಡಿವ ನೀರಿನ ಯೋಜನೆ ಕುರಿತು ಮುಖ್ಯಾಧಿಕಾರಿ ಪ್ರವೀಣ ಭೋಗಾರ ಅವರಿಂದ ಮಾಹಿತಿ ಪಡೆದರು. ನಿರಂತರ ಕುಡಿವ ನೀರಿನ ಯೋಜನೆ ಕಾಮಗಾರಿ ನನೆೆಗುದಿಗೆ ಬಿದ್ದಿದ್ದು, ಪಟ್ಟಣದಲ್ಲಿ ಒಂದೇ ಟ್ಯಾಂಕ್‌ನ ಮೂಲಕ 23 ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಇತ್ತೀಚೆಗೆ ಡಿಸಿ ಅವರು 1.20 ಕೋಟಿ ರೂ. ನೀರು ಸಂಗ್ರಹ ಟ್ಯಾಂಕ್ ಕಾಮಗಾರಿಗೆ ಬಿಡುಗಡೆಗೊಳಿಸಿದ್ದು, ತಾಂತ್ರಿಕ ಕಾರಣಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು. ಸಂಸದ ಕುಮಾರನಾಯಕ ಪ್ರತಿಕ್ರಿಯಿಸಿ, ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕುಡಿವ ನೀರಿನ ಕಾಮಗಾರಿ ನಡೆಸಲು ಸೂಚಿಸಲಾಗುವುದು. ಆದಷ್ಟು ಬೇಗ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಪ್ರಮುಖರಾದ ತಮ್ಮಣ್ಣ ಗುತ್ತೇದಾರ, ಎಸ್.ಆರ್.ರಸೂಲ್, ಗೋವಿಂದ ನಾಯಕ್, ಅರುಣ ಯರದಿಹಾಳ, ರುದ್ರಪ್ಪ ಅಂಗಡಿ ಇದ್ದರು.