ರಾಯಚೂರಿನ ಜಿಪಂ ಸಭಾಂಗಣದಲ್ಲಿ ಬುಧವಾರ ಕೇಂದ್ರ ಸರ್ಕಾರದ ವಾರ್ತಾ ಶಾಖೆಯಿಂದ ಪುರಸ್ಕೃತ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಆಯೋಜಿಸಲಾಗಿದ್ದ ವಾರ್ತಾಲಾಪ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ನಿತೀಶ್ ಕೆ ಉದ್ಘಾಟಿಸಿದರು. ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಪವನ ಕಿಶೋರ್ ಪಾಟೀಲ್, ವಾರ್ತಾ ಶಾಖೆಯ ಹೆಚ್ಚುವರಿ ಮಹಾ ನಿರ್ದೇಶಕ ಎಚ್.ಜಿ ರವೀಂದ್ರ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ, ರಿಪೋರ್ಟರ್ಸ್ ಗಿಲ್ಡ್‌ನ ಅಧ್ಯಕ್ಷ ವಿಜಯಕುಮಾರ ಜಾಗಟಗಲ್,ವಾರ್ತಾ ಸಹಾಯಕ ಗವಿಸಿದ್ದಪ್ಪ ಹೊಸಮನಿ ಇದ್ದರು.
- ಸ್ಥಳೀಯ ಪತ್ರಕರ್ತರ ಕಾರ್ಯಕ್ಷಮತೆಯೂ ಹೆಚ್ಚಾಗಲಿ -ಡಿಸಿ
- ಮಾಧ್ಯಮ ಪ್ರತಿನಿಧಿಗಳಿಗೆ ವಾರ್ತಾಲಾಪ ಕಾರ್ಯಾಗಾರ
- ಕೇಂದ್ರ ಸರ್ಕಾರದ ಯೋಜನೆ
ರಾಯಚೂರು ವರದಿಗಾರಿಕೆ, ಸಂಪಾದಕೀಯ ಬರೆಹ, ಪತ್ರಿಕೋದ್ಯಮದ ಪ್ರಾಥಮಿಕ ಹಂತದ ತಿಳಿವಳಿಕೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ತಾಲೂಕು ಮಟ್ಟದಲ್ಲಿನ ಪತ್ರಕರ್ತರಿಗೆ ತಿಳಿವಳಿಕೆಯ ಕಾರ್ಯಕ್ಷಮತೆ ಹೆಚ್ಚಿಸುವ ದಿಶೆಯಲ್ಲಿ ಕಾರ್ಯಗಾರಗಳನ್ನು ರೂಪಿಸಬೇಕಿದೆಂದು ಜಿಲ್ಲಾಧಿಕಾರಿ ನಿತೀಶ್ ಕೆ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಕೇಂದ್ರ ಸರ್ಕಾರದ ವಾರ್ತಾ ಶಾಖೆ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಾರ್ತಾಲಾಪ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮಾಧ್ಯಮಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕಾರ್ಯ ನಿರಂತರವಾಗಿ ಆಗಬೇಕು. ವಾರ್ತಾಲಾಪದಂತಹ ಈ ರೀತಿಯ ಕಾರ್ಯಗಾರಗಳು ನಿರಂತರ ನಡೆಯಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಪವನ ಕಿಶೋರ್ ಪಾಟೀಲ್ ಮಾತನಾಡಿ, ಕೆಲವು ಯೋಜನೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆ ಇರುತ್ತದೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಗ್ಗೂಡಿ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಬೇಕು. ಜನತೆಗೆ ತಿಳಿಯುವ ಭಾಷೆಯಲ್ಲಿ ಯೋಜನೆಗಳ ಪ್ರಚಾರ ಕಾರ್ಯ ಆಗಬೇಕು. ಬಹಳಷ್ಟು ಯೋಜನೆಗಳ ಮಾಹಿತಿ ಆನಲೈನದಲ್ಲಿ ಲಭ್ಯವಿದ್ದು, ಕನ್ನಡ ಭಾಷೆಯಲ್ಲಿ ಬುಕ್ ಲೆಟ್ ಸಿದ್ದಪಡಿಸಿ ಸಾಮಾನ್ಯ ಜನರಿಗೆ ತಿಳಿಸುವ ಕಾರ್ಯವಾಗಬೇಕು ಎಂದರು.
ವಾರ್ತಾ ಶಾಖೆಯ ಹೆಚ್ಚುವರಿ ಮಹಾ ನಿರ್ದೇಶಕ ಎಚ್.ಜಿ ರವೀಂದ್ರ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳ ಪ್ರಚುರಪಡಿಸಲು ಪತ್ರಕರ್ತರು ಹೆಚ್ಚಿನ ಒತ್ತು ಕೊಡಬೇಕು. ಬಡವರು, ಮಹಿಳೆಯರು, ಯುವಕರು, ರೈತರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಪ್ರಧಾನ ಮಂತ್ರಿಗಳು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಈ ಯೋಜನೆಗಳ ಬಗ್ಗೆ ವ್ಯಾಪಕ ಮಾಹಿತಿ ಜನತೆಗೆ ತಲುಪಿಸುವ ಕಾರ್ಯ ಆಗಬೇಕಿದೆ ಎಂದರು.
ಜಿಲ್ಲಾ ಪಂಚಾಯತ್ ಸಿಇಓ ಈಶ್ವರ ಕುಮಾರ ಕಾಂದೂ ಮಾತನಾಡಿ, ಭಾರತ ಸರ್ಕಾರದ ವಾರ್ತಾ ಶಾಖೆಯಿಂದ ರಾಯಚೂರು ಜಿಲ್ಲೆಯಲ್ಲಿ ಪತ್ರಕರ್ತರಿಗೆ ಕಾರ್ಯಗಾರ ಹಮ್ಮಿಕೊಂಡಿದ್ದು ಶ್ಲಾಘನೀಯ ಕಾರ್ಯ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ್, ರಿಪೋರ್ಟರ್ಸ್ ಗಿಲ್ಡ್‌ನ ಅಧ್ಯಕ್ಷ ವಿಜಯಕುಮಾರ ಜಾಗಟಗಲ್ ಮಾತನಾಡಿದರು.
ಈ ಸಂದರ್ಭದಲ್ಲಿ ಎಎಸ್ಪಿ ಎಸ್.ಜೆ ಕುಮಾರಸ್ವಾಮಿ, ಜಿಪಂ ಯೋಜನಾ ನಿರ್ದೇಶಕ ಶರಣ ಬಸವರಾಜ, ಡಿಚ್‌ಓ ಡಾ.ಸುರೇಂದ್ರಬಾಬು, ವಾರ್ತಾ ಸಹಾಯಕ ಗವಿಸಿದ್ದಪ್ಪ ಹೊಸಮನಿ ಸೇರಿ ಅನೇಕರು ಇದ್ದರು.