ಸಿಂಧನೂರು ತಾಲೂಕಿನ ಅಂಬಾಮಠದಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಜಿಲ್ಲಾಧಿಕಾರಿ ನಿತೀಶ ಕೆ. ಪರಿಶೀಲಿಸಿದರು. ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ತಹಸೀಲ್ದಾರ್ ಅರುಣ ದೇಸಾಯಿ, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ರಂಗನಗೌಡ ಗೊರೇಬಾಳ, ಇಒ ಚಂದ್ರಶೇಖರ ಇದ್ದರು.
ಸಿಂಧನೂರು: ತಾಲೂಕಿನ ಅಂಬಾಮಠದಲ್ಲಿ ಜ.3 ರಂದು ನಡೆಯುವ ಅಂಬಾದೇವಿ ಜಾತ್ರೆ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಆಗಮಿಸುವ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ನಿತೀಶ ಕೆ. ಸಿದ್ಧತೆಗಳನ್ನು ಪರಿಶೀಲಿಸಿದರು.
ಅಂಬಾಮಠದ ಅಂಬಾದೇವಿ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ 4 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ, ಯಾವುದೇ ಅಡಚಣೆಗಳು ಉಂಟಾಗದಂತೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
ಜಾತ್ರಾ ಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ, ಸಮರ್ಪಕ ಕುಡಿವ ನೀರಿನ ವ್ಯವಸ್ಥೆ, ಅಗತ್ಯವಿರುವ ಕಡೆಗಳಲ್ಲಿ ಆರೋಗ್ಯ ಶಿಬಿರಗಳು ಮತ್ತು ಪ್ರಾಥಮಿಕ ಚಿಕಿತ್ಸೆ ಕೇಂದ್ರಗಳ ಸ್ಥಾಪನೆ ಮಾಡುವಂತೆ ಡಿಸಿ ತಿಳಿಸಿದರು. ಭಕ್ತರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಎದುರಾಗದಂತೆ ಆರೋಗ್ಯ ಇಲಾಖೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು.