ಲಿಂಗಸುಗೂರಿನಲ್ಲಿ ಜೆಸ್ಕಾಂ ಕಚೇರಿಗೆ ಹೊಂದಿಕೊಂಡ ಡಬ್ಬಾ ಅಂಗಡಿ ತೆರವು ಮಾಡುತ್ತಿರುವ ಜೆಸಿಬಿ. ಪುರಸಭೆ ಮುಖ್ಯಾಧಿಕಾರಿ ನಟರಾಜ, ಪರಸರ ಇಂಜಿನಿಯರ್ ಗಿರಿಜಾ, ಪುರಸಭೆ ಸಿಬ್ಬಂದಿ ಇದ್ದರು.
ಲಿಂಗಸುಗೂರು: ಸಂಚಾರ ದಟ್ಟಣೆ, ಪಾದಚಾರಿಗಳಿಗೆ ಸಮಸ್ಯೆ ಆಗುತ್ತಿರುವ ಹಿನ್ನೆಲೆಯಲ್ಲಿ ಪುರಸಭೆಯಿಂದ ಗುರುವಾರ ಬೀದಿಬದಿ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ರಸ್ತೆಬದಿ ಅನಧಿಕೃತವಾಗಿ ಡಬ್ಬಾ ಅಂಗಡಿಗಳನ್ನಿಟ್ಟು ಹಲವು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದರು. ಪಾದಚಾರಿಗಳು, ವಾಹನ ಸಂಚಾರಕ್ಕೆ ಅಡ್ಡಿಯಾಗಿರುವ ಡಬ್ಬಾ ಅಂಗಡಿಗಳನ್ನು ಖಾಲಿ ಮಾಡುವಂತೆ ಪುರಸಭೆ ನೋಟಿಸ್ ನೀಡಿತ್ತು. ಇದನ್ನು ಖಂಡಿಸಿ ಹಲವು ವ್ಯಾಪಾರಿಗಳು, ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಆದರೆ, ಪುರಸಭೆ ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಿತ್ತು.
ಕಳೆದ ಎರಡು ದಿನಗಳಿಂದ ಕೆಲವರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಖಾಲಿ ಮಾಡಿದ್ದರು. ಉಳಿದವರು ತೆರವುಗೊಳಿಸಿರಲಿಲ್ಲ, ಹೀಗಾಗಿ ಗುರುವಾರ ಬೆಳ್ಳಂಬೆಳಗ್ಗೆ ಪುರಸಭೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು ಕಾರ್ಯಾಚರಣೆ ನಡೆಸಿದರು.
ಬಸ್ ನಿಲ್ದಾಣ ಸರ್ಕಲ್ ರಸ್ತೆ, ಪದವಿ ಪೂರ್ವ ಕಾಲೇಜು, ಜೆಸ್ಕಾಂ ಕಚೇರಿ, ಎಸ್‌ಬಿಐ ಮುಂಭಾಗ, ರಾಷ್ಟ್ರೀಯ ಹೆದ್ದಾರಿ ರಸ್ತೆ, ಪ್ರವಾಸಿ ಮಂದಿರದ ರಸ್ತೆ ಬದಿ ಅಂಗಡಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿದರು. ತೆರವು ಬಳಿಕ ಪುರಸಭೆ ಅಗಲವಾದ ರಸ್ತೆ, ಪಾದಚಾರಿ ರಸ್ತೆ ನಿರ್ಮಾಣ ಮಾಡಿ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.