ತಾಲೂಕಿನ ಕಲ್ಯಾಲ ಗ್ರಾಮದ ಮೇಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಇಚೇಗೆ ಪ್ರೌಢ ಶಾಲಾ ಮಕ್ಕಳಿಗೆ ಬಾಲ್ಯವಿವಾಹ ತಡೆ ಹಾಗೂ ಪೋಕ್ಸೊ ಕಾಯ್ದೆಯ ಜಾಗೃತಿ ಕಾರ್ಯಕ್ರಮದಲ್ಲಿ ತಂಬಾಕು ಉತ್ಪನ್ನಗಳ ಸೇವನೆಯ ದುಷ್ಪರಿಣಾಮಗಳ ಪೋಸ್ಟರ್ ಬಿಡುಗಡೆ ಮಾಡಲಾಯಿತು. ವೈದ್ಯಾಧಿಕಾರಿ ಡಾ.ರಮೇಶ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ನಿಲಯ ಪಾಲಕ ರಂಗನಾಥ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ, ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ಭಾನುಕಾಂತ ರೆಡ್ಡಿ, ಹಿರಿಯ ಪಿಹೆಚ್‌ಸಿಓ ರೇಣುಕಾ, ಶಿಕ್ಷಕರಾದ ರಮೇಶ, ರಸೂಲ್‌ಬಿ, ಮಹಾಲಕ್ಷ್ಮಿ, ಆಶಾ ಕಾರ್ಯಕರ್ತೆ ಶಂಕ್ರಮ್ಮ ಇದ್ದರು. 
ರಾಯಚೂರು

ಮಕ್ಕಳ ಜೀವನದ ಗುರಿಸಾಧನೆಗೆ ಬಾಲ್ಯವಿವಾಹದಿಂದ ಅಡ್ಡಿ: ಡಾ ರಮೇಶ

ರಾಯಚೂರು ಬಾಲ್ಯ ವಿವಾಹವು ಮುಖ್ಯವಾಗಿ ಹೆಣ್ಣುಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆಂದು ಕಲ್ಮಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಮೇಶ್ ತಿಳಿಸಿದರು.
ತಾಲೂಕಿನ ಕಲ್ಮಾಲ ಗ್ರಾಮದ ಮೇಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಂಯೋಗದಲ್ಲಿ ಇಚೇಗೆ ಪ್ರೌಢ ಶಾಲಾ ಮಕ್ಕಳಿಗೆ ಹಮ್ಮಿಕೊಂಡ ಬಾಲ್ಯವಿವಾಹ ತಡೆ ಹಾಗೂ ಪೋಕ್ಸೊ ಕಾಯ್ದೆಯ ಜಾಗೃತಿ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾಲಕರು ತಮ್ಮ ಮಗಳು ಅಥವಾ ಮಗನಿಗೆ ಬಾಲ್ಯ ವಿವಾಹ ಮಾಡುವುದರಿಂದ ಅವರ ಉನ್ನತ ಸಾಧನೆಗೆ ಪಾಲಕರೆ ಅಡ್ಡಿಪಡಿಸಿದಂತೆ, ಮಕ್ಕಳ ಜೀವನದ ಉನ್ನತ ಗುರಿ ಸಾಧನೆಗಾಗಿ ಹೆಣ್ಣಿಗೆ 18 ವರ್ಷ ಗಂಡಿಗೆ 21 ವರ್ಷ ತುಂಬುವವರೆಗೂ ಮದುವೆ ಮಾಡದಂತೆ ಮುಂದಾಗಬೇಕು.
ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಋತುಚಕ್ರ ಆರಂಭವಾದ ತಕ್ಷಣ ಮದುವೆ ಮಾಡುವ ದುಡುಕಿನ ನಿರ್ಧಾರಗಳಿಂದ ದೈಹಿಕವಾಗಿ ಗರ್ಭಕೋಶವು ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆಯಾಗದೆ ಗರ್ಭಪಾತ, ಮಗು ಸತ್ತು ಹುಟ್ಟುವುದು, ದಿನತುಂಬದ ಹೆರಿಗೆ, ಬಾಲ್ಯದಲ್ಲಿ ಅಪೌಷ್ಟಿಕತೆ, ಅಕಾಲಿಕ ಗರ್ಭಧಾರಣೆ, ಹೆರಿಗೆಯಲ್ಲಿನ ತೊಡಕುಗಳು, ಮಗುವಿನ ಲಾಲನೆ ಪಾಲನೆಯ ಮಾಹಿತಿ ಕೊರತೆ ಕಾರಣದಿಂದ ಮಗು ಅಪೌಷ್ಟಿಕತೆಗೆ ತುತ್ತಾಗುತ್ತದೆ. ಈ ಹಿನ್ನಲೆ ಬಾಲ್ಯ ವಿವಾಹ ತಡೆ ಎಲ್ಲರೂ ಶ್ರಮಿಸೊಣವೆಂದು ತಿಳಿಸಿದರು.
ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ ಮಾತನಾಡಿ, ಪ್ರತಿ ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ 10-19 ವರ್ಷಗಳ ವಯೋಮಾನ ಅತ್ಯಂತ ಸೂಕ್ಷ್ಮ ಕಾಲ ಘಟ್ಟವಾಗಿದೆ. ಈ ಹಂತದಲ್ಲಿ ಹಾರ್ಮೋನುಗಳ ಬದಲಾವಣೆಯೊಂದಿಗೆ ಉಂಟಾಗುವ ಧ್ವನಿ ಬದಲಾವಣೆ, ಬಾಲಕರಲ್ಲಿ ಮಿಸೆ ಗಡ್ಡಗಳ ಕಾಣಿಸುವಿಕೆ, ಬಾಲಕಿಯರಲ್ಲಿ ಋತುಚಕ್ರ ಆರಂಭವಾಗುವ ಜೊತೆಗೆ ದೈಹಿಕ ಬದಲಾವಣೆ, ಕಂಕುಳದಲ್ಲಿ ಕೂದಲುಗಳ ಕಾಣಿಸುವಿಕೆ ಸೇರಿದಂತೆ ಮುಖದಲ್ಲಿ ಮೊಡುವೆಗಳು ಕಂಡು ಬರಲಾರಂಬಿಸುತ್ತವೆ.
ಇವೆಲ್ಲವುಗಳು ಹದಿಹರೆಯದ ಸಂಕೇತವಾದರೆ, ದೈಹಿಕ ಆಕರ್ಷಣೆಗೆ ಒಳಗಾಗುವ ಸೂಕ್ಷ್ಮ ಅಂಶದ ಕುರಿತು ಅದರ ಸಾಧಕ-ಭಾದಕಗಳ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕಿದೆ. ಅಲ್ಲದೆ ಮಕ್ಕಳ ಏಳ್ಗೆಗಾಗಿ ಹಗಲಿರಳು ತಂದೆ-ತಾಯಿ ಶ್ರಮಿಸುವುದನ್ನು ನಾವು ಕಾಣುತ್ತೇವೆ. ಮಕ್ಕಳು ಉನ್ನತ ಹುದ್ದೆ, ಸ್ಥಾನಮಾನ ಪಡೆಯಲಿ ಎಂಬ ಮಹಾದಾಸೆ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ನಿಲಯ ಪಾಲಕ ರಂಗನಾಥ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ, ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ಭಾನುಕಾಂತ ರೆಡ್ಡಿ, ಹಿರಿಯ ಪಿಹೆಚ್‌ಸಿಓ ರೇಣುಕಾ, ಶಿಕ್ಷಕರಾದ ರಮೇಶ, ರಸೂಲ್‌ಬಿ, ಮಹಾಲಕ್ಷ್ಮಿ, ಆಶಾ ಕಾರ್ಯಕರ್ತೆ ಶಂಕ್ರಮ್ಮ, ನಾಗಮ್ಮ ಸೇರಿದಂತೆ ಶಾಲಾ ಮಕ್ಕಳು ಇದ್ದರು.