ಸಿಂಧನೂರಿನ ನಗರಸಭೆ ಸಭಾಂಗಣದಲ್ಲಿ ವಸತಿ ನಿಲಯಗಳ ಮೇಲ್ವಿಚಾರಕರು, ಅಧಿಕಾರಿಗಳ ಸಭೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು. ತಹಸೀಲ್ದಾರ್ ಅರುಣ್ ದೇಸಾಯಿ, ತಾಪಂ ಇಒ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ಡಿವೈಎಸ್ಪಿ ಚಂದ್ರಶೇಖರ ನಾಯಕ ಇದ್ದರು.
- ಶಾಸಕ ಹಂಪನಗೌಡ ಬಾದರ್ಲಿ ಸೂಚನೆ
- ವಸತಿ ನಿಲಯಗಳ ಮೇಲ್ವಿಚಾರಕರ ಸಭೆ
ಸಿಂಧನೂರು: ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಶುಚಿಯಾದ ಆಹಾರ ನೀಡಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಶಾಸಕ ಹಂಪನಗೌಡ ಬಾದರ್ಲಿ ಸೂಚನೆ ನೀಡಿದರು.
ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ತಾಲೂಕಿನ ವಸತಿ ನಿಲಯಗಳ ಮೇಲ್ವಿಚಾರಕರು, ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ವಸತಿ ನಿಲಯಗಳ ಅಡುಗೆಮನೆ, ಕುಡಿವ ನೀರು ಮತ್ತು ಆಹಾರದ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಬೇಕು. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಅಡುಗೆ ತಯಾರಿಕೆಯಲ್ಲಿ ಶುಚಿತ್ವ ನಿರ್ಲಕ್ಷ್ಯ ವಹಿಸದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು. ನಿಲಯಗಳಲ್ಲಿರುವ ಸಮಸ್ಯೆಗಳು ಹಾಗೂ ಸೌಲಭ್ಯಗಳ ಕೊರತೆ ಪಟ್ಟಿ ನೀಡಿದರೆ ಅಗತ್ಯ ಸೌಕರ್ಯ ಒದಗಿಸಲಾಗುವುದು ಎಂದು ಬಿಸಿಎಂ ಅಧಿಕಾರಿ ಲಿಂಗಪ್ಪ ಅಂಗಡಿಗೆ ಸೂಚಿಸಿದರು.
ತಹಸೀಲ್ದಾರ್ ಅರುಣ್ ದೇಸಾಯಿ ಮಾತನಾಡಿ, ವಸತಿ ನಿಲಯಗಳಿಗೆ ಅನುಮತಿ ಇಲ್ಲದೆ ಯಾರನ್ನೂ ಒಳಗೆ ಬಿಡುವಂತಿಲ್ಲ. ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಐಡಿ ಕಾರ್ಡ್ ತೋರಿಸಿ ಪ್ರವೇಶಿಸಬೇಕು. ಬಾಲಕಿಯರ ವಸತಿ ನಿಲಯಗಳಿಗೆ ಹೊರಗಿನವರನ್ನು ನಿರ್ಬಂಧಿಸಿದ್ದು, ಅಲ್ಲಿ ಪಾಠ ಮಾಡುವ ಶಿಕ್ಷಕರನ್ನು ಹೊರತುಪಡಿಸಿ, ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಅನುಮತಿ ಮೇರೆಗೆ ಪಾಲಕರಿಗೆ ಅವಕಾಶ ನೀಡಬೇಕು. ಸುಳ್ಳು ಹೇಳಿ ಬರುವ ಯಾರಿಗೂ ಅವಕಾಶ ನೀಡಬಾರದು ಎಂದು ತಿಳಿಸಿದರು. ವಿವಿಧ ವಸತಿ ನಿಲಯ ಮೇಲ್ವಿಚಾರಕರು, ಕುಡಿವ ನೀರಿನ ಸಮಸ್ಯೆ, ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಮಾಡಿದರು.
ತಾಪಂ ಇಒ ಚಂದ್ರಶೇಖರ ಮಾತನಾಡಿ, ವಸತಿ ನಿಲಯಗಳಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲಾಗುವುದು. ಶುದ್ಧ ಕುಡಿವ ನೀರು ಪೂರೈಸಲಾಗುವುದು ಎಂದರು. ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ಡಿವೈಎಸ್ಪಿ ಚಂದ್ರಶೇಖರ ನಾಯಕ, ಬಿಸಿಎಂ, ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದ ಅಧಿಕಾರಿಗಳು ಇದ್ದರು.