ಗೊರೇಬಾಳ ಗ್ರಾಮದ ಚನ್ನಬಸವ ತಾತನ ದೇವಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಡವಿ ಅಮರೇಶ್ವರ ವಿರಕ್ತ ಮಠದ ತೋಂಟದಾರ್ಯ ಸ್ವಾಮೀಜಿ ಪುರಾಣ ಪ್ರವಚನ ಮಾಡಿದರು. ಮಹಾಲಿಂಗ ಸ್ವಾಮೀಜಿ, ಡಾ.ಸಿದ್ಧಲಿಂಗ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ ಇದ್ದರು.
ಗೊರೇಬಾಳ: ಚನ್ನಬಸವ ತಾತನವರು ಕಾಲಿಟ್ಟ ಭೂಮಿ ಪಾವನವಾಗುತ್ತದೆ. ಅವರು ಗೊರೇಬಾಳ ಗ್ರಾಮದ ಮೇಲೆ ತೋರಿದ ಪ್ರೀತಿ, ಮಮತೆಯಿಂದ ಇಂದು ಶರಣಬಸವೇಶ್ವರ ದೇವಾಲಯದಿಂದ ಭಕ್ತರ ಇಷ್ಟಾರ್ಥ ಸಿದ್ಧಿಸುತ್ತಿದೆ ಎಂದು ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತ ಮಠದ ಮಹಾಲಿಂಗ ಸ್ವಾಮೀಜಿ ಹೇಳಿದರು.
ಗ್ರಾಮದಲ್ಲಿ ಚನ್ನಬಸವ ತಾತನ 71ನೇ ವರ್ಷದ ಪುರಾಣ ಮಹೋತ್ಸವ ಹಾಗೂ 47ನೇ ವರ್ಷದ ಜಾತ್ರೋತ್ಸವ ಮತ್ತು 20ನೇ ವರ್ಷದ ರಥೋತ್ಸವದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಚನ್ನಬಸವ ಶಿವಯೋಗಿಗಳ ಜೀವನ ಚರಿತಾಮೃತ ಪುರಾಣ ಕಾರ್ಯಕಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಒಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಡಾ.ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಗ್ರಾಮದ ಹಿರಿಯರು ಚನ್ನಬಸವ ತಾತನ ಬಳಿ ಹೋಗಿ ಶರಣಬಸವೇಶ್ವರರ ದೇವಾಲಯ ನಿರ್ಮಾಣಕ್ಕೆ ಆಶೀರ್ವದಿಸಲು ಬೇಡಿಕೆ ಇಟ್ಟಿದ್ದರು. ಆಗ ಚನ್ನಬಸವ ತಾತ, ಗ್ರಾಮದ ಹತ್ತಿರ ತಗ್ಗಿನಲ್ಲಿ ಆಲದ ಮರವಿದ್ದು ಅದರ ಪಕ್ಕದಲ್ಲಿ ಲಿಂಗಬಾವಿ ಇದೆ. ಆ ಸ್ಥಳವೇ ದೇವಸ್ಥಾನ ನಿರ್ಮಾಣಕ್ಕೆ ಸೂಕ್ತ ಸ್ಥಳವಾಗಿದೆ ಎಂದು ಆಶೀರ್ವದಿಸಿದರು. ಅಂದು ನಿರ್ಮಾಣಗೊಂಡ ದೇವಾಲಯ ಇಂದು ಸಾವಿರಾರು ಭಕ್ತರ ಪಾಲಿಗೆ ಇಷ್ಟಾರ್ಥ ಸಿದ್ಧಿಯನ್ನು ಕರುಣಿಸುವ ಪಾವನ ಕ್ಷೇತ್ರವಾಗಿದೆ ಎಂದರು.
ಒಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸ್ದಿರು. ಅಡವಿ ಅಮರೇಶ್ವರ ವಿರಕ್ತಮಠದ ತೋಂಟದಾರ್ಯ ಸ್ವಾಮೀಜಿ, ಅಡವಿ ಅಮರೇಶ್ವರ ಚನ್ನಬಸವ ತಾತನವರ ಪುರಾಣ ಪ್ರವಚನ ಮಾಡಿದರು. ಶರಣಯ್ಯ ಸ್ವಾಮಿ ಹಾರ್ಮೋನಿಯಂ ಜತೆಗೆ ಗಾಯನ ಮಾಡಿದರೆ, ವೀರೇಶ ಕುಮಾರ ಕಾರಟಗಿ ತಬಲಾ ಸಾಥ್ ನೀಡಿದರು.