ರಾಯಚೂರಿನ ಮೆಥೋಡಿಸ್ಟ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ನಿಮಿತ್ತ ಕ್ರೈಸ್ತ ಸಮುದಾಯದವರು ಗುರುವಾರ ಸಮೂಹಿಕ ಪ್ರಾರ್ಥನೆ ಸಲ್ಲಿಸಿದರು.
- ಸಂಭ್ರಮದಿಂದ ಕ್ರಿಸ್‌ಮಸ್ ಆಚರಣೆ
- ನಾನಾ ಚರ್ಚ್‌ಗಳಲ್ಲಿ ಸಮೂಹಿಕ ಪ್ರಾರ್ಥನೆ
ರಾಯಚೂರು ನಗರ ಸೇರಿದಂತೆ ಜಿಲ್ಲಾಧ್ಯಂತ ಗುರುವಾರ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತರು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಶಾಂತಿ, ಅಹಿಂಸೆ, ಪ್ರೀತಿ ಹಾಗೂ ತ್ಯಾಗದ ಸಂದೇಶ ಸಾರಿದ ಸಂತ ಏಸುವನ್ನು ಎಲ್ಲರೂ ಪೂಜಿಸುವ ಮೂಲಕ ಸ್ಮರಿಸಿ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಗರದ ಮೆಥೋಡಿಸ್ಟ್ ಚರ್ಚ್, ಇನ್‌ಫೆಂಟ್ ಜೀಸಸ್ ಶಾಲೆ, ಕ್ಯಾಥೋಲಿಕ್ ಚರ್ಚ್, ಕ್ರೈಸ್ತರ ಪ್ರಾರ್ಥನಾ ಮಂದಿರಗಳು, ಫ್ರಾನ್ಸಿಸ್ ದೇವಾಲಯದಲ್ಲಿ ಕ್ರಿಸ್‌ಮಸ್ ನಿಮಿತ್ತ ಕ್ಯಾಥೋಲಿಕ್ ಸಮುದಾಯದ ಕ್ರೈಸ್ತರು ಬುಧವಾರ ರಾತ್ರಿ ಕಾರೆಲ್ಸ್ ಹಾಡುವ ಮೂಲಕ ಸಂತ ಕ್ರಿಸ್ತನನ್ನು ಬರಮಾಡಿಕೊಂಡರು. ನಂತರ ವಿಶೇಷ ಪ್ರಾರ್ಥನೆ ಸಲ್ಲಿಸಿ ಸಂತ ಕ್ರಿಸ್ತನನ್ನು ಶ್ರದ್ಧಾಪೂರ್ವಕವಾಗಿ ಸ್ಮರಿಸಲಾಯಿತು.
ಆದರಂತೆ ಹಬ್ಬದ ನಿಮಿತ್ತ ಚರ್ಚ್‌ಗಳನ್ನು ವಿದ್ಯುತ್‌ದ್ದೀಪಗಳಿಂದ ಅಲಂಕರಿಸಲಾಗಿತ್ತು. ಕ್ರಿಸ್‌ಮಸ್ ಟ್ರೀಗಳನ್ನು ನಿರ್ಮಿಸಲಾಗಿತ್ತು. ಕ್ರಿಸ್‌ಮಸ್ ನಿಮಿತ್ತ ಮೆಥೋಡಿಸ್ಟ್ ಚರ್ಚ್‌ನಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.