ಹೋಳಿ ಹಬ್ಬದ ನಿಮಿತ್ತ ಸಿಂಧನೂರಿನ ಶಹರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಶಾಂತಿ ಸಭೆ ನಡೆಯಿತು. ಡಿವೈಎಸ್ಪಿ ಚಂದ್ರಶೇಖರ ನಾಯಕ, ಸಿಪಿಐ ವಿನಾಯಕ, ಪಿಐ ವೀರಾರಡ್ಡಿ ಇದ್ದರು.
ಸಿಂಧನೂರು: ನಗರದಲ್ಲಿ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ಮೂಲಕ ಭಾವೈಕ್ಯ ಮೆರೆಯಬೇಕು. ಇದಕ್ಕೆ ನಮ್ಮ ಇಲಾಖೆಯು ಸಂಪೂರ್ಣ ಸಹಕಾರ ನೀಡಲಿದೆ ಎಂದು ಡಿವೈಎಸ್ಪಿ ಚಂದ್ರಶೇಖರ ನಾಯಕ ಹೇಳಿದರು.
ಹೋಳಿ ನಿಮಿತ್ತ ನಗರ ಶಹರ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಬ್ಬದ ವೇಳೆ ಒತ್ತಾಯಪೂರ್ವಕವಾಗಿ ಜನರಿಗೆ ಬಣ್ಣ ಹಾಕುವುದು, ತೊಂದರೆ ನೀಡಬಾರದು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ನಮಗೂ ಕೆಲಸ ನೀಡದೆ ಶಾಂತಿ, ಸೌಹಾರ್ದದಿಂದ ಹಬ್ಬ ಆಚರಿಸಬೇಕು. ಶಾಂತಿ ಕದಡದಂತೆ ಎಚ್ಚರವಹಿಸಿದ್ದು, ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.
ಪಿಐ ವೀರಾರಡ್ಡಿ ಮಾತನಾಡಿ, ಈ ಹಬ್ಬವು ಸಂತೋಷ, ಪರಸ್ಪರ ಸಹೋದರತ್ವ ಬಿಂಬಿಸುವುದಾಗಿದ್ದು, ಅನ್ಯ ಸಮುದಾಯದವರಿಗೆ ತೊಂದರೆ ಕೊಟ್ಟು ಬಣ್ಣ ಹಾಕುವುದು ಮಾಡಬಾರದು ಎಂದರು. ಸಿಪಿಐ ವಿನಾಯಕ ರಾಥೋಡ್, ಬಸವ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಶರಣಪ್ಪ ತೆಂಗಿನಕಾಯಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲ್ಲಿಕ್ ವಕೀಲ ಇದ್ದರು.