ಮುದಗಲ್ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ ಮಾತನಾಡಿದರು. ಸಿಪಿಐ ರಾಮಪ್ಪ ಜಲಗಾರ್, ಪಿಎಸ್‌ಐ ವೆಂಕಟೇಶ ಮಾಡಗೇರಿ, ಮುಸ್ಲಿಂ ಧರ್ಮಗುರು ಮೌಲಾನಾ ಜಮೀರ್ ಅಹ್ಮದ್ ಖಾಜಿ ಸಾಬ್, ರಾಹುಲ್ ಗಾಂಧಿ ಯುವ ಬ್ರಿಗೇಡ್‌ನ ರಾಜ್ಯ ಕಾರ್ಯದರ್ಶಿ ಎಸ್.ಆರ್. ರಸೂಲ್ ಇತರರಿದ್ದರು.
- ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ ಸೂಚನೆ
- ಮುದಗಲ್ ಪೊಲೀಸ್ ಠಾಣೆ ಶಾಂತಿ ಸಭೆ
ಮುದಗಲ್: ಪಟ್ಟಣದಲ್ಲಿ ಹಿಂದೂ-ಮುಸ್ಲಿಮರು ಪ್ರತಿ ಹಬ್ಬವನ್ನು ಭಾವೈಕ್ಯದಿಂದ ಆಚರಿಸುತ್ತಿದ್ದು, ಇದನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಸಭಾಂಗಣದಲ್ಲಿ ಬಕ್ರೀದ್ ನಿಮಿತ್ತ ಭಾನುವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಗೆ ಯಾರೂ ಕಿವಿಗೊಡದೆ ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಶ್ರದ್ಧೆಯಿಂದ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಗೆ ಸಮಾಜದವರು ಸಹಕರಿಸಬೇಕು ಎಂದು ಕೋರಿದರು.
ಮುಸ್ಲಿಂ ಧರ್ಮಗುರು ಮೌಲಾನಾ ಜಮೀರ್ ಅಹ್ಮದ್ ಖಾಜಿ ಸಾಬ್ ಹಾಗೂ ರಾಹುಲ್ ಗಾಂಧಿ ಯುವ ಬ್ರಿಗೇಡ್‌ನ ರಾಜ್ಯ ಕಾರ್ಯದರ್ಶಿ ಎಸ್.ಆರ್ . ರಸೂಲ್, ಸಿಪಿಐ ರಾಮಪ್ಪ ಜಲಗಾರ್ ಮಾತನಾಡಿದರು. ಪ್ರಮುಖರಾದ ಅಮೀರ್ ಬೇಗ್ ಉಸ್ತಾದ್, ಅಜ್ಮೀರ್ ಬೆಳ್ಳಿಕಟ್, ಮಾಸೂಮ್ ಷರೀಫ್, ಮಹಿಬೂಬ್ ಕಡ್ಡಿಪುಡಿ, ಶರಣಪ್ಪ ಕಟ್ಟಿಮನಿ, ರಘುವೀರ್, ಗಯಾಸ್ ಬೇಗ್, ವೆಂಕಟೇಶ ಹಿರೇಮನಿ, ಬಸವರಾಜ ಬಂಕದಮನಿ, ಪ್ರತಾಪ್ ಹಿರೇಮನಿ, ನ್ಯಾಮತ್ ಖಾದ್ರಿ, ಹೇಮಂತ್ ನಾಗಲಾಪುರ, ಜವರ್‌ಲಾಲ್ ಸೇಠ್ ಇತರರಿದ್ದರು.