ಮುದಗಲ್ ಸಮೀಪದ ಆಮದಿಹಾಳ ಗ್ರಾಮದಲ್ಲಿ ಅನಧಿಕೃತ ಆಸ್ಪತ್ರೆಗೆ ತಾಲೂಕು ವೈದ್ಯಾಧಿಕಾರಿ ನೇತೃತ್ವದ ತಂಡ ಬೀಗ ಹಾಕಿ ನೋಟಿಸ್ ಅಂಟಿಸಿತು.
ಮುದಗಲ್ : ಅನಧಿಕೃತವಾಗಿ ನಡೆಸುತ್ತಿದ್ದ ಆಮದಿಹಾಳ ಗ್ರಾಮದ ಸಜ್ಜಲಶ್ರೀ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳ ತಂಡ ಶನಿವಾರ ರಾತ್ರಿ ದಾಳಿ ನಡೆಸಿ ಪ್ರಕರಣ ದಾಖಲಿಸಿ ಆಸ್ಪತ್ರೆ ಜಪ್ತಿ ಮಾಡಿದೆ.
ಸರ್ಕಾರದಿಂದ ಅನುಮೋದನೆ ಪಡೆಯದೆ ಡಾ.ಮುರುಘೇಂದ್ರ ಸ್ವಾಮಿ ಅವರು ಕ್ಲಿನಿಕ್‌ನಲ್ಲಿ ರೋಗಿಗಳ ತಪಾಸಣೆ ನಡೆಸುತ್ತಿದ್ದ ಬಗ್ಗೆ ಸಹಾಯಕ ಆಯುಕ್ತರಿಗೆ ದೂರುಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ವೈದ್ಯಾಧಿಕಾರಿಗಳ ತಂಡ ದಾಳಿ ನಡೆಸಿದೆ. ಕೆಪಿಎಂಇ ಕಾಯ್ದೆಯಡಿ ಕ್ಲಿನಿಕ್ ನೋಂದಣಿ ಆಗಿರಲಿಲ್ಲ.
ಆದರೂ, ರೋಗಿಗಳ ಆರೋಗ್ಯ ತಪಾಸಣೆ ಮಾಡುತ್ತಿದ್ದ ಡಾ.ಮುರುಗೇಶ್, ಮೊಣಕಾಲು ನೋವು ಕಡಿತಕ್ಕೆ ವಿದ್ಯುತ್ ಶಾಖ ನೀಡುವುದರೊಂದಿಗೆ ಇಂಜೆಕ್ಷನ್ ಮಾಡುವುದು, ಥೈರಾಯ್ಡ ಮಾತ್ರೆಗಳನ್ನು ವಿತರಿಸುವ ಕುರಿತು ದೂರಿನ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಹನುಮಂತರಾಯ ತಳ್ಳಳ್ಳಿ ತಿಳಿಸಿದ್ದಾರೆ. ತಾಲೂಕು ಆಯುಷ್ ಅಧಿಕಾರಿ ಡಿ.ಎಚ್.ಹುಲ್ಲೂರು, ಸಿಬ್ಬಂದಿ ಅರ್ಜುನ್, ವೀರೇಶ ಇತರರಿದ್ದರು.