ರಾಯಚೂರಿನ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವರ ಹಮ್ಮಿಕೊಳ್ಳಲಾಗಿದ್ದ 10ನೇ ತರಗತಿ, ಪಿಯುಸಿ ನಂತರ ವೃತ್ತಿ ಪ್ರಪಂಚದ ಅರಿವು ಮೂಡಿಸಲು ವೃತ್ತಿ ಶಿಕ್ಷಣ ಪ್ರದರ್ಶನ ಮತ್ತು ಕೆರಿಯರ್ ಮೇಳಕ್ಕೆ ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ ಚಾಲನೆ ನೀಡಿದರು. ಡಿಡಿಪಿಐ ಡಾ.ಕೆ.ಡಿ.ಬಡಿಗೇರ, ಡಿಡಿಪಿಯು ಸೋಮಶೇಖರಪ್ಪ ಹೋಕ್ರಾಣಿ, ಡಯಟ್ ಪ್ರಾಂಶುಪಾಲರಾದ ಚಂದ್ರಶೇಖರ ಭಂಡಾರಿ, ಡಯಟ್ ಹಿರಿಯ ಉಪನ್ಯಾಸಕರಾದ ಸುಖದೇವ, ಶಿವಮ್ಮ, ಸುಖದೇವ್ ಇದ್ದರು.
ರಾಯಚೂರು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಗೆ ಹೆಚ್ಚಿನ ಆದ್ಯತೆ ನೀಡದೆ. ಉತ್ತಮ ಓದುವ ಅಭ್ಯಾಸದ ಮೂಲಕ ತಮ್ಮ ಮುಂದಿನ ಜೀವನ ಚೆನ್ನಾಗಿ ರೂಪಿಸಿಕೊಳ್ಳಬೇಕೆಂದು ಜಿಪಂ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ ಹೇಳಿದರು.
ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವರ ಹಮ್ಮಿಕೊಳ್ಳಲಾಗಿದ್ದ 10ನೇ ತರಗತಿ, ಪಿಯುಸಿ ನಂತರ ವೃತ್ತಿ ಪ್ರಪಂಚದ ಅರಿವು ಮೂಡಿಸಲು ವೃತ್ತಿ ಶಿಕ್ಷಣ ಪ್ರದರ್ಶನ ಮತ್ತು ಕೆರಿಯರ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ತಂದೆ- ತಾಯಿಯವರ ಕನಸುಗಳನ್ನು ಈಡೇರಿಸಬೇಕು. ವಿದ್ಯಾರ್ಥಿಗಳು ಕೌಶಲ್ಯ ಕಡೆ ಗಮನಹರಿಸಬೇಕು. ಎಐ ಬಗ್ಗೆ ವಿದ್ಯಾರ್ಥಿಗಳು ಸರಿಯಾಗಿ ತಿಳಿದುಕೊಳ್ಳಬೇಕು. ಹತ್ತನೇ ಹಾಗೂ ದ್ವಿತೀಯ ಪಿಯುಸಿ ನಂತರ ಕೋರ್ಸ್‌ಗಳ ಆಯ್ಕೆಗೆ ಈ ಮೇಳ ಸಹಕಾರಿಯಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗಿದ್ದು, ವಿದ್ಯಾರ್ಥಿಗಳು ತಮ್ಮ ಆರೋಗ್ಯ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸರಿಯಾದ ಸಮಯಕ್ಕೆ ಹೆಚ್ಚಾಗಿ ನೀರು ಕುಡಿಯಬೇಕು. ಜಿಲ್ಲಾಡಳಿತದಿಂದ ಈ ಬಗ್ಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಅವುಗಳನ್ನು ಎಲ್ಲರೂ ಪಾಲಿಸಬೇಕು ಎಂದರು.
ಡಿಡಿಪಿಐ ಕೆ.ಡಿ.ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಂಡು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದರು.
ಮೇಳದಲ್ಲಿ ವಿವಿಧ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಹಂತದ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ, ವಿದ್ಯಾರ್ಥಿ ವೇತನ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿದ್ದ ಮಳಿಗೆಯಲ್ಲಿ ಕೃಷಿ ವಿಶ್ವವಿದ್ಯಾಲಯ ಅಡಿಯಲ್ಲಿನ ಕೋರ್ಸ್‌ಗಳ ಮಾಹಿತಿ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ, ಕಾರ್ಮಿಕ ಕಲ್ಯಾಣ ಇಲಾಖೆ ಸೇರಿದಂತೆ ಇತರೆ ಸರ್ಕಾರಿ ಇಲಾಖೆಗಳಿಂದ ವಿವಿಧ ಶಿಕ್ಷಣಾವಕಾಶಗಳು, ತಾಂತ್ರಿಕ ಶಿಕ್ಷಣ, ಐಟಿಐ, ಡಿಪ್ರೋಮಾ, ಎಂಜಿನಿಯರಿಂಗ್, ಮೆಡಿಕಲ್, ಕೌಶಲ್ಯ ತರಬೇತಿ, ಕೃಷಿ, ಕಂಪ್ಯೂಟರ್ ಕೋಸ್‌ಗಳು, ವಿದ್ಯಾರ್ಥಿ ವೇತನ, ತರಬೇತಿ ಕೇಂದ್ರಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಡಿಡಿಪಿಯು ಸೋಮಶೇಖರಪ್ಪ ಹೋಕ್ರಾಣಿ, ಡಯಟ್ ಪ್ರಾಂಶುಪಾಲರಾದ ಚಂದ್ರಶೇಖರ ಭಂಡಾರಿ, ಡಯಟ್ ಹಿರಿಯ ಉಪನ್ಯಾಸಕರಾದ ಸುಖದೇವ, ಶಿವಮ್ಮ, ಸುಖದೇವ್ ಸೇರಿ ಅನೇಕರು ಇದ್ದರು.