ಎನ್‌ಆರ್‌ಬಿಸಿ ವಿತರಣಾ ಕಾಲುವೆ 7ಬಿ ಕಾಮಗಾರಿ ತಡೆದ ರೈತರು.  
ರಾಯಚೂರು

ನಾಲೆಗೆ ಗೇಟ್ ಅಳವಡಿಸಲು ವಿರೋಧ

ಲಿಂಗಸುಗೂರು: ಸ್ಕಾಡಾ ಯೋಜನೆಯಡಿ ನಾರಾಯಣಪುರ ಬಲದಂಡೆ ಕಾಲುವೆ 7ಬಿ ವಿತರಣಾ ನಾಲೆಗೆ ಹೊಸ ಗೇಟ್ ಅಳವಡಿಕೆಗೆ ರೈತರು ವಿರೋಧ ವ್ಯಕ್ತಪಡಿಸಿ ಶನಿವಾರ ಕಾಮಗಾರಿ ತಡೆದರು. 
ಗೇಟ್ ಅಳವಡಿಸಲು ಬಂದಿದ್ದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ರೈತರು, ಔಟ್‌ಲೆಟ್ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದ್ದು ಪೂರ್ಣಗೊಳಿಸುವವರೆಗೆ ಗೇಟ್ ಅಳವಡಿಕೆಗೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. 
ಔಟ್‌ಲೆಟ್ ಕಾಮಗಾರಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಗುತ್ತಿಗೆದಾರರು ಹೇಳಿದರೂ ಕಾಮಗಾರಿ ನಡೆಸಲು ಅವಕಾಶ ನೀಡಲಿಲ್ಲ. ಎನ್‌ಆರ್‌ಬಿಸಿ ಎಇಇ ಬಸವರಾಜ ಮಾತನಾಡಿ, ಔಟ್‌ಲೆಟ್ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ತಿಳಿಸಲಾಗುವುದು. ಗೇಟ್ ಕಾಮಗಾರಿಗೆ ಅಡ್ಡಿಪಡಿಸಬಾರದೆಂದು ಕೋರಿದರು. ಆದರೆ, ರೈತರು ಮೊದಲು ಔಟ್‌ಲೆಟ್ ಪೂರ್ಣಗೊಳಿಸಬೇಕೆಂದು ತಾಕೀತು ಮಾಡಿದರು. 
ಈ ವೇಳೆ ಎನ್‌ಆರ್‌ಬಿಸಿ ಸಹಾಯಕ ಇಂಜಿನಿಯರ ಬೈಲಪ್ಪ, ಸ್ಕಾಡಾ ಗುತ್ತಿಗೆ ಕಂಪನಿ ಇಂಜಿನಿಯರ ಸದಾನಂದ, ರೈತ ಮುಖಂಡರಾದ ಪ್ರಸಾದರೆಡ್ಡಿ, ಲಕ್ಷ್ಮೀನಾರಾಯಣ ರೆಡ್ಡಿ, ನಾಗಪ್ಪ, ಹನುಮಂತ, ಅಲ್ಲಿಸಾಬ್, ಮಲ್ಲೇಶ, ಕಿರಣ್, ಖಾದರಸಾಬ್, ಕನಕಪ್ಪ, ನಾಗರಾಜ, ಮಲ್ಲು, ಸಾಬಯ್ಯ ಇತರರಿದ್ದರು.