ಮಾನ್ವಿ ತಾಲೂಕಿನ ಹಿರೇಕೊಟ್ನೆಕಲ್‌ನಲ್ಲಿ ಶನಿವಾರ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು. ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು, ಕರೇಗುಡ್ಡ ಮಹಾಂತೇಶ್ವರ ಮಠದ ಮಹಾಂತಲಿಂಗ ಸ್ವಾಮೀಜಿ, ದೇವರ ಭೂಪುರ ಸಂಸ್ಥಾನ ಮಠದ ಅಭಿನವ ಗಜದಂಡ ಶಿವಾಚಾರ್ಯರು, ಕಿಡಿಗಣ್ಣಯ್ಯಸ್ವಾಮಿ ಉಮಳಿಹೊಸೂರುಮ, ಚನ್ನಬಸಯ್ಯಸ್ವಾಮಿ ಹಿರೇಮಠ, ಶಾಂತಮೂರ್ತಿಸ್ವಾಮಿ ಹಿರೇಮಠ ಇತರರಿದ್ದರು. 
ರಾಯಚೂರು

ಮಠಗಳಿಂದ ಸ್ವಸ್ಥ ಸಮಾಜ ನಿರ್ಮಾಣ

ಮಠಗಳಿಂದ ಸ್ವಸ್ಥ ಸಮಾಜ ನಿರ್ಮಾಣ Building a healthy society through monasteries
* ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಶಿವಾಚಾರ್ಯರ ಹೇಳಿಕೆ  ಹಿರೇಕೊಟ್ನೆಕಲ್‌ನಲ್ಲಿ ಧರ್ಮಸಭೆ
ಮಾನ್ವಿ: ಶಾಖಾ ಮಠಗಳ ಹಿರೇಮಠಗಳು ಜನಸಾಮಾನ್ಯರಿಗೆ ಶಿವ ತತ್ವಗಳನ್ನು ಬೋಧಿಸುತ್ತ ಧರ್ಮದ ಹಾದಿಯಲ್ಲಿ ನಡೆಯುವಂತೆ ಮಾಡುತ್ತಿವೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು. 
ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದಲ್ಲಿ ಶನಿವಾರ ಗುರುಶಾಂತ ಶಿವಾಚಾರ್ಯ ವಿದ್ಯಾಪೀಠದ ಆವರಣದಲ್ಲಿ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮ ನಿಮಿತ್ತ ಏರ್ಪಡಿಸಿದ್ದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು. ಇಂತಹ ಧಾರ್ಮಿಕ ವ್ಯವಸ್ಥೆಯನ್ನು ವೀರಶೈವ ಲಿಂಗಾಯತ ಧರ್ಮದ ಪರಂಪರೆಯಲ್ಲಿ ಮಾತ್ರ ಕಾಣಲು ಸಾಧ್ಯ. ನಾಡಿನ ಸಾವಿರಾರು ಮಠಗಳು ಸತ್ ಪರಂಪರೆ, ಧಾರ್ಮಿಕ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗುವುದರ ಜತೆಗೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಸಮಾಜವನ್ನು ಸರಿದಾರಿಗೆ ತರುವ ಕಾರ್ಯದಲ್ಲಿ ತೊಡಗಿವೆ ಎಂದರು. 
ಸಾಕ್ಷತ್ ಶಿವನೇ ಗುರುವಿಗಿಂತ ದೊಡ್ಡವರಿಲ್ಲ ಎಂದು ಆಗಮಗಳ ಮೂಲಕ ತಿಳಿಸಿದ್ದಾನೆ. ಗುರುವಿನ ಮೂಲಕವೇ ಉನ್ನತವಾದ ಧಾರ್ಮಿಕ ಸಂಸ್ಕಾರ, ಧರ್ಮೋಪದೇಶ, ಮೌಲ್ಯಗಳನ್ನು ಹೊಂದಲು ಸಾಧ್ಯ. ಪ್ರತಿ ಸಲವೂ ಭಗವಂತ ಭೂಮಿಗೆ ದುಷ್ಟರ ಸಂಹಾರಕ್ಕಾಗಿ ಅವತರಿಸುತ್ತಾನೆ. ಶಿವನೇ ಗುರುವಿನ ಅವತಾರದಲ್ಲಿ ಬಂದು ಜನರಲ್ಲಿನ ದುಷ್ಟಬುದ್ಧಿ ಕಳೆಯುವ ಕಾರ್ಯ ಮಾಡುತ್ತಿದ್ದಾನೆ ಎಂದರು. 
ವೀರಶೈವ ಲಿಂಗಾಯತ  ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ ಮಾತನಾಡಿ, ನಾಡಿನ ಮಠಗಳು ಸನಾತನ ಧರ್ಮದ ಉಳಿವು ಹಾಗೂ ಧರ್ಮದ ಮಾರ್ಗದಲ್ಲಿ ನಡೆಯುವಂತೆ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವ ಮೂಲಕ ಜಾಗೃತಿ ಮೂಡಿಸುತ್ತಿವೆ. ಇಂತಹ ಕಾರ್ಯಕ್ರಮಗಳಿಂದ ಜನರಿಗೆ ಧರ್ಮ, ಪರಂಪರೆ ಬಗ್ಗೆ ತಿಳಿಯಲು ಸಾಧ್ಯ. ನಾಡಿನ ಜನರಲ್ಲಿ  ಧಾರ್ಮಿಕ ಭಾವನೆಗಳನ್ನು ಬೆಳೆಸುವಲ್ಲಿ ಪಂಚಪೀಠಗಳು ಶ್ರಮಿಸುತ್ತಿವೆ ಎಂದು ತಿಳಿಸಿದರು. 
ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು, ಕರೇಗುಡ್ಡ ಮಹಾಂತೇಶ್ವರ ಮಠದ ಮಹಾಂತಲಿಂಗ ಸ್ವಾಮೀಜಿ, ದೇವರ ಭೂಪುರ ಸಂಸ್ಥಾನ ಮಠದ ಅಭಿನವ ಗಜದಂಡ ಶಿವಾಚಾರ್ಯರು, ನೀಲಗಲ್ ಬೃಹನ್ಮಠದ ಅಭಿನವ ಶಾಂತಮಲ್ಲ ಶಿವಾಚಾರ್ಯರು, ಸುಲ್ತಾನಪುರ ಸಂಸ್ಥಾನ ಹಿರೇಮಠ ಶಂಭು ಸೋಮನಾಥ ಶಿವಾಚಾರ್ಯರು, ಉಟಕನೂರು ಅಡವಿಸಿದ್ಧೇಶ್ವರ ಮಠದ ಮರಿಬಸವ ದೇಶಿಕೇಂದ್ರ ಶಿವಾಚಾರ್ಯರು, ಬಲ್ಲಟಗಿ ಗುರುಬಸವ ತಾತ, ಕಿಡಿಗಣ್ಣಯ್ಯಸ್ವಾಮಿ ಉಮಳಿಹೊಸೂರು, ಚನ್ನಬಸಯ್ಯಸ್ವಾಮಿ ಹಿರೇಮಠ, ಶಾಂತಮೂರ್ತಿಸ್ವಾಮಿ ಹಿರೇಮಠ ಇತರರಿದ್ದರು.
"

ಒಂದು ಮಠ ಪರಿಪೂರ್ಣವಾಗಬೇಕಾದರೆ ಬರುವ ಜನರಿಗೆ ಕೊರಳಲ್ಲಿ ಇಷ್ಟಲಿಂಗ ಧಾರಣೆ ಮಾಡಿ ನಿತ್ಯ ಪೂಜೆ ಮಾಡುವಂತೆ ಪ್ರೇರಣೆ ನೀಡಬೇಕು. ಪ್ರತಿಯೊಬ್ಬರೂ ಸ್ವಧರ್ಮದ ಬಗ್ಗೆ ನಿಷ್ಠೆ ಹೊಂದಿ ಪರಧರ್ಮದ ಬಗ್ಗೆ ಸಹಿಷ್ಣುತೆ ಹೊಂದಿರಬೇಕು .ಅವರವರ ಧರ್ಮಗಳ ಆಚರಣೆಗೆ ಮುಕ್ತ ಅವಕಾಶ ನೀಡಬೇಕು. ದೇಶದ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು. ದೇಶ ಉಳಿದಾಗ ಮಾತ್ರ ಧರ್ಮ ಉಳಿಯಲು ಸಾಧ್ಯ.