ಮಹಮ್ಮದ್ ಸಾಧಿಕ್ ಅಲಿ 
ರಾಯಚೂರು

ತಡೆಗೋಡೆ ವೈಜ್ಞಾನಿಕವಾಗಿ ನಿರ್ಮಿಸಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಮಹಮ್ಮದ್ ಸಾಧಿಕ್ ಅಲಿ ಒತ್ತಾಯ
  • ಮುದಗಲ್ ಹಜರತ್ ಹುಸೇನಿ ಆಲಂ ಆಶುರ್‌ಖಾನಾ (ಸುನ್ನಿ) ಸಮಿತಿ ಸುದ್ದಿಗೋಷ್ಠಿ
ಮುದಗಲ್: ಪಟ್ಟಣದ ರಾಯಚೂರು ರಸ್ತೆ ಮತ್ತು ಛಾವಡಿ ಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸುರಕ್ಷತಾ ತಡೆಗೋಡೆಯನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ವೈಜ್ಞಾನಿಕವಾಗಿ ನಿರ್ಮಿಸಬೇಕೆಂದು ಹಜರತ್ ಹುಸೇನಿ ಆಲಂ ಆಶುರ್‌ಖಾನಾ (ಸುನ್ನಿ) ಸಮಿತಿ ಕಾರ್ಯದರ್ಶಿ ಮಹಮ್ಮದ್ ಸಾಧಿಕ್ ಅಲಿ ಒತ್ತಾಯಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 4ನೇ ಹಂತದ ನಗರೋತ್ಥಾನ ಯೋಜನೆಯಡಿ 35 ಲಕ್ಷ ರೂ. ವೆಚ್ಚದ ತಡೆಗೋಡೆಯನ್ನು ಆಲಂಗಳ ಸವಾರಿ ಮಾರ್ಗದ ಸಮೀಪದಲ್ಲಿ ನಿರ್ಮಿಸಲಾಗುತ್ತಿದ್ದು, ಅವೈಜ್ಞಾನಿಕ ಕಾಮಗಾರಿಯಾಗಿದೆ. ಈ ಸ್ಥಳದಲ್ಲಿ ಮೊಹರಂ ಹಬ್ಬವನ್ನು ಭಾವೈಕ್ಯದಿಂದ ಆಚರಿಸಲಾಗುತ್ತಿದ್ದು, ಪ್ರತಿವರ್ಷ ಅಂತರ್ ಜಿಲ್ಲಾ ಹಾಗೂ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಮೊಹರಂ ಕೊನೇ ದಿನ ಆಲಂಗಳು ಭೇಟಿಯಾಗುವ ಸ್ಥಳದ ಬಳಿ ತಡೆಗೋಡೆ ನಿರ್ಮಿಸುವುದರಿಂದ ರಸ್ತೆ ಕಿರಿದಾಗಿ ಜನದಟ್ಟಣೆ ನಿಯಂತ್ರಿಸಲು ಕಷ್ಟವಾಗುತ್ತದೆ ಎಂದರು.
ಭಕ್ತರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತೊಂದರೆಯಾಗುತ್ತದೆ. ಆದ್ದರಿಂದ ಕೂಡಲೇ ಮೇಲಧಿಕಾರಿಗಳು ಎಚ್ಚೆತ್ತುಕೊಂಡು ತಡೆಗೋಡೆ ಕಾಮಗಾರಿಯನ್ನು ಸ್ಥಗಿತಗೊಳಿಸಿ ಭಕ್ತರಿಗೆ ಅನೂಕೂಲವಾಗುವಂತೆ ರಸ್ತೆ ಅಗಲೀಕರಿಸಿ, ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸಬೇಕು. ಇಲ್ಲವಾದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಹಜರತ್ ಹುಸೇನಿ ಆಲಂ ಆಶುರ್ ಖಾನಾ (ಸುನ್ನಿ) ಸಮಿತಿ ಅಧ್ಯಕ್ಷ ಅಮೀರ್ ಬೇಗ್ ಉಸ್ತಾದ್, ಉಪಾದ್ಯಕ್ಷ ಮಾಸೂಮ್ ಷರೀಫ್, ಗಯಾಸುದ್ದೀನ್, ಯಮನೂರ ನದಾಫ್ ಇತರರಿದ್ದರು.