ಸಿಂಧನೂರಿನಲ್ಲಿ ತಾಪಂ ಎಡಿ ವೆಂಕಪ್ಪಗೆ ದಢೇಸುಗೂರು ಆಯರ್ಲಾ ಗ್ರಾಮ ಘಟಕದಿಂದ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ರಾಘವೇಂದ್ರ ಉಪ್ಪಳ, ತುಳಸಪ್ಪ ದಢೇಸುಗೂರು ಇತರರಿದ್ದರು. 
ರಾಯಚೂರು

ಹೈಟೆಕ್ ಮಹಿಳಾ ಶೌಚಗೃಹ ನಿರ್ಮಿಸಿ

ನರೇಶ್ ಕುಮಾರ್
ಸಿಂಧನೂರು: ತಾಲೂಕಿನ ದಢೇಸುಗೂರು ಗ್ರಾಮದ ಒಂದನೇ ವಾರ್ಡ್‌ನ ತಾಯಮ್ಮ ನಗರದಲ್ಲಿ ಹೈಟೆಕ್ ಮಹಿಳಾ ಶೌಚಗೃಹ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ (ಆಯರ್ಲಾ) ಗ್ರಾಮ ಘಟಕದಿಂದ ತಾಪಂ ಎಡಿ ವೆಂಕಪ್ಪಗೆ ಮನವಿ ಸಲ್ಲಿಸಲಾಯಿತು. 
ತಾಯಮ್ಮ ನಗರದಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿ ಅಂದಾಜು 300ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು, ಮೀನುಗಾರಿಕೆ, ಕೃಷಿ ಕೂಲಿ ಕೆಲಸ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಇಲ್ಲಿನ ಮಹಿಳೆಯರಿಗೆ ಶೌಚಗೃಹ ಇಲ್ಲದ ಕಾರಣ ಅನಿವಾರ್ಯವಾಗಿ ಬಯಲಿಗೆ ಹೋಗುವಂತಾಗಿದೆ. 
ತುಂಗಭದ್ರಾ ನದಿ ಪಕ್ಕದಲ್ಲಿದ್ದು ತಡೆಗೋಡೆ ನಿರ್ಮಿಸದ ಕಾರಣ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ಬೀದಿ ದೀಪಗಳೂ ಇಲ್ಲವಾಗಿದ್ದು, ರಾತ್ರಿ ಸಮಯದಲ್ಲಿ ಹೊರಬರಲು ಭಯಪಡುವಂತಾಗಿದೆ. ನೈರ್ಮಲ್ಯ ಕೊರತೆಯಿಂದ ಅನಾರೋಗ್ಯ ಭೀತಿ ಎದುರಿಸುತ್ತಿದ್ದಾರೆ. 
ಹೈಟೆಕ್ ಶೌಚಗೃಹ, ಪ್ರತ್ಯೇಕ ಕುಡಿವ ನೀರಿನ ಟ್ಯಾಂಕ್, ತುಂಗಭದ್ರಾ ನದಿಗೆ ತಡೆಗೋಡೆ ನಿರ್ಮಿಸಬೇಕು. ಬೀದಿ ದೀಪಗಳನ್ನು ಅಳವಡಿಸಬೇಕು. ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು. ಪ್ರಮುಖರಾದ ರಾಘವೇಂದ್ರ ಉಪ್ಪಳ, ತುಳಸಪ್ಪ ದಢೇಸುಗೂರು ಇದ್ದರು.