ಮಸ್ಕಿ: ನರೇಗಾ ಯೋಜನೆ ಹೆಸರು ಬದಾಲಾಯಿಸಿದ ಬಿಜೆಪಿಯರು ಗಾಂಧೀಜಿಯ ಸಿದ್ಧಾಂತಗಳನ್ನು ಕೊಲೆ ಮಾಡುತ್ತಿದ್ದಾರೆ. ಅವರ ಹಿಡನ್ ಅಜೆಂಡ್ ಈಗ ಬಯಲಾಗಿದ್ದು ಬಡವರ ಪರ ಇರುವ ಯೋಜನೆಯನ್ನು ರದ್ದು ಮಾಡಿ ಗುತ್ತಿಗೆದಾರರ ಪರವಾಗಿ ನಿಲ್ಲುವ ಮೂಲಕ ನರೇಗಾ ಯೋಜನೆ ಮೂಲ ಉದ್ದೇಶವನ್ನು ಹಾಳುಮಾಡುತ್ತಿದ್ದಾರೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಆರೋಪಿಸಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಗ್ರಾಮೀಣ ಪ್ರದೇಶದ ಬಡವರು ಗುಳೆ ಹೋಗುವುದನ್ನು ತಪ್ಪಿಸಲು ಬಡವರಿಗೆ ಉದ್ಯೋಗ ಗ್ಯಾರಂಟಿ ನೀಡಿ ಅವರ ಜೀವನಕ್ಕೆ ಆಶ್ರಯ ಕಲ್ಪಿಸಿದ್ದರು. ಈಗ ಬಿಜೆಪಿಯವರು ಗಾಂಧಿ ಹೆಸರು ತೆಗೆದು ವಿಬಿ ಜಿ ರಾಮ್ ಜಿ ಎಂದು ಹೆಸರು ಬದಲಾವಣೆ ಮಾಡಿದ್ದಾರೆ. ಈ ಯೋಜನೆಯಡಿ ಉದ್ಯೋಗ ನೀಡುವ ಸ್ವರೂಪವೇ ಬದಲಾಯಿಸಿದ್ದಾರೆ. ಇದರ ವಿರುದ್ಧ ಜನ ಜಾಗೃತಿ ಮೂಡಿಸಿ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ ಮಾತನಾಡಿ, ಗ್ರಾಮೀಣ ಭಾಗದ ರೈತರು ಕೂಲಿಕಾರ್ಮಿಕರ ದುಡಿಯುವ ಹಕ್ಕನ್ನು ಬಿಜೆಪಿಯವರು ಕಸಿದುಕೊಂಡಿದ್ದಾರೆ. ಎಐಸಿಸಿ ಸೂಚನೆ ಮೇರೆಗೆ ಕ್ಷೇತ್ರದಲ್ಲಿ ಹೋರಾಟದ ರೂಪುರೇಷೆ ತಯಾರಿಸಿ ಜನರಿಗೆ ಈ ಯೋಜನೆ ಮಾರಕದ ಬಗ್ಗೆ ತಿಳಿವಳಿಕೆ ಹೇಳಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವುದಾಗಿ ತಿಳಿಸಿದರು.
ಗ್ರಾಮೀಣ ಕಾಂಗ್ರೆಸ್ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಮಹಿಬೂಬ ಸಾಬ ಮುದ್ದಾಪುರ, ಹನುಮೇಶ ಬಾಗೋಡಿ ಇತರರಿದ್ದರು.