ತುಪ್ಪದೂರು ಚನ್ನಬಸವೇಶ್ವರ ಜಾತ್ರೆ ನಿಮಿತ್ತ ಏರ್ಪಡಿಸಿದ್ದ ಸಾಮೂಹಿಕ ವಿವಾಹದಲ್ಲಿ ನವಜೋಡಿಗಳಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಶುಭ ಕೋರಿದರು.  
ರಾಯಚೂರು

ಸಾಮೂಹಿಕ ವಿವಾಹದಿಂದ ಅನುಕೂಲ

ಕವಿತಾಳ: ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದಾಗಿದೆ. ಆದ್ದರಿಂದ ಇಂಥ ಸರಳ ಮದುವೆಗಳಿಗೆ ಆದ್ಯತೆ ನೀಡಬೇಕು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು. 
ಪಾಮನಕಲ್ಲೂರು ಗ್ರಾಪಂ ವ್ಯಾಪ್ತಿಯ ತುಪ್ಪದೂರಿನಲ್ಲಿ ಶ್ರೀ ಚನ್ನಯ್ಯ ತಾತನ ಜಾತ್ರೆ ನಿಮಿತ್ತ ಏರ್ಪಡಿಸಿದ್ದ ಆರು ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಜೋಡಿಗೆ ದೈವದ ಕೃಪೆ, ವಿವಿಧ ಸ್ವಾಮಿಗಳು, ಗಣ್ಯರ, ಗುರುಹಿರಿಯರ ಆಶೀರ್ವಾದ ದೊರೆಯಲಿದೆ ಎಂದರು.  
ನಮಗೆ ಖುಷಿ ಕೊಡಿ: ಸಾಮೂಹಿಕ ವಿವಾಹಕ್ಕೆ ಅನುಮತಿ ನೀಡಲು ಅಧಿಕಾರಿಗಳನ್ನು ಕೇಳಿದಾಗ ‘ನಮಗೆ ಖುಷಿ (ಹಣ) ಕೊಡಿ’ ಎಂದು ಕೇಳಿದರು. ನಮ್ಮದು ಕುಗ್ರಾಮವಾಗಿದ್ದು ಹಣ ನೀಡಲು ನಮ್ಮಿಂದಾಗಲ್ಲವೆಂದು ಹೇಳಿದರೂ ಅಧಿಕಾರಿಗಳು ಪರವಾನಗಿ ನೀಡಲು ಸತಾಯಿಸಿದರು ಎಂದು ಗ್ರಾಮಸ್ಥರು ಶಾಸಕ ತುರ್ವಿಹಾಳಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ಹಣ ಕೇಳಿದ್ದಕ್ಕೆ ಸಂಬಂಧಿಸಿ ಸೂಕ್ತ ದಾಖಲೆ ನೀಡಿದರೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಬಿಜೆಪಿಯ ಜಿಲ್ಲಾ ಪ್ರಧಾನಕಾರ್ಯದರ್ಶಿ ಸಂತೋಷ ರಾಜಗುರು, ಬಿಜೆಪಿಯ ಪ್ರಮುಖ ಪ್ರಸನ್ನ ಪಾಟೀಲ್, ಮಹಾಂತಮ್ಮ ಮಾತನಾಡಿದರು. ದವಸ-ಧಾನ್ಯ, ವಸ್ತ್ರಗಳನ್ನು ನೀಡಿದ ದಾನಿಗಳು, ಗಣ್ಯರನ್ನು ಸನ್ಮಾನಿಸಲಾಯಿತು. ಹನುಮನಾಳದ ಶಿವನಂದೀಶ್ವರ ಸ್ವಾಮಿ ಸಾನ್ನಿಧ್ಯವಹಿಸಿದ್ದರು. ಮಸ್ಕಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮೆಹಬೂಬ್‌ಸಾಬ್ ಮುದ್ದಾಪುರ, ತ್ರಿಲೋಕರಡ್ಡಿ ಬೆಂಗಳೂರು, ಚನ್ನಬಸವ ಕಡ್ಡೋಣಿ, ಭೀಮೇಶ ನಾಯಕ, ಕಂಡೋಜಿರಾವ್, ಗ್ರಾಪಂ ಉಪಾಧ್ಯಕ್ಷ ಲಕ್ಷ್ಮಣ ನಾಯಕ ಇತರರಿದ್ದರು.