ಇಂಗಳದಾಳ ಗ್ರಾಮದ ಫಲಾನುಭವಿಗಳಿಗೆ ನವೆಂಬರ್ ಪಡಿತರ ಧಾನ್ಯದ ಚೀಟಿ ನೀಡಿರುವ ಏಜೆನ್ಸಿ.
- ಗಬ್ಬೂರು ಹೋಬಳಿಯ ಇಂಗಳದಾಳದಲ್ಲಿ ವಿತರಣೆ ಯಾಗದ ಪಡಿತರ ಧಾನ್ಯ
- ಫಲಾನುಭವಿಗಳು ಪರದಾಟ
- ಫಲಾನುಭವಿಗಳಿಗೆ ನವೆಂಬರ್ ಪಡಿತರ ಧಾನ್ಯದ ಚೀಟಿ ನೀಡಿದ ಏಜೆನ್ಸಿ
ದೇವದುರ್ಗ: ತಾಲೂಕಿನ ಗಬ್ಬೂರು ಹೋಬಳಿಯ ಇಂಗಳದಾಳದಲ್ಲಿ ಪಡಿತರ ಧಾನ್ಯ ವಿತರಣೆಯಾಗದೆ ಫಲಾನುಭವಿಗಳು ಪರದಾಡುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯ ನವೆಂಬರ್ ಧಾನ್ಯಗಳು ಏಜೆನ್ಸಿಗೆ ಬಂದರೂ ಜನರಿಗೆ ತಲುಪಿಲ್ಲ. ಊರಿಗೆ ಬಂದು ಹಂಚಿ ಎಂದು ಜನರು ಪಟ್ಟುಹಿಡಿದರೆ ನಮ್ಮಲ್ಲಿಯೇ ಬಂದು ತೆಗೆದುಕೊಂಡು ಹೋಗಿ ಎಂದು ಏಜೆನ್ಸಿ ತಾಕೀತು ಮಾಡುತ್ತಿದೆ.
ಇಬ್ಬರ ನಡುವಿನ ಹಗ್ಗ ಜಗ್ಗಾಟದಿಂದ ಬಡವರು, ವಯೋವೃದ್ಧರಿಗೆ ಸಮಸ್ಯೆಯಾಗುತ್ತಿದೆ. ಇಂಗಳದಾಳ, ಹದ್ದಿನಾಳ, ಅಮರಾಪುರ ನಡುವೆ ನ್ಯಾಯಬೆಲೆ ಅಂಗಡಿ ಮಂಜೂರಾಗಿದೆ. ಅಮರಾಪುರದಲ್ಲಿ ಕೇಂದ್ರವಿದ್ದು ಅಲ್ಲಿಂದ ಹದ್ದಿನಾಳ, ಇಂಗಳದಾಳಗೆ ಪಡಿತರಧಾನ್ಯ ವಿತರಣೆಯಾಗುತ್ತಿತ್ತು. ಇಷ್ಟುದಿನ ಏಜೆನ್ಸಿ ಪಡೆದವರು ವಾಹನದಲ್ಲಿ ಎರಡು ಊರಿಗೆ ತೆಗೆದುಕೊಂಡು ಹೋಗಿ ಫಲಾನುಭವಿಗಳಿಗೆ ಹಂಚಿಕೆ ಮಾಡುತ್ತಿದ್ದರು.
ಅಕ್ಟೋಬರ್‌ನಲ್ಲಿ ಪಡಿತರ ವಿತರಿಸುವ ಏಜೆನ್ಸಿ(ಅಂಗಡಿ ಮಾಲೀಕ) ಬದಲಾವಣೆಯಾಗಿದ್ದು, ಊರಿಗೆ ಬಂದು ಹಂಚಿಕೆ ಮಾಡುವುದಿಲ್ಲ. ನೀವೇ ಕೇಂದ್ರಕ್ಕೆ ಬಂದು ತೆಗೆದುಕೊಂಡುಹೋಗಿ ಎನ್ನುತ್ತಿದ್ದಾರೆ. ಅಮರಾಪುರ ಕೇಂದ್ರ ಹದ್ದಿನಾಳ, ಇಂಗಳದಾಳಗೆ 3-4 ಕಿಮೀ ದೂರವಿದೆ. ಬಡವರು, ವಯೋವೃದ್ಧರು ಕೇಂದ್ರಕ್ಕೆ ಬಂದು ತೆಗೆದುಕೊಂಡು ಹೋಗಲು ಸಮಸ್ಯೆಯಾಗುತ್ತದೆ. ಇಷ್ಟು ದಿನ ಹಳೇ ಏಜೆನ್ಸಿ ವಿತರಣೆ ಮಾಡಿದಂತೆ ನೀವೂ ಊರಿಗೆಬಂದು ಹಂಚಿಕೆ ಮಾಡಿ ಎಂದು ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ.
ನಿಯಮ ಪ್ರಕಾರ ನಿಗದಿಪಡಿಸಿದ ನ್ಯಾಯಬೆಲೆ ಅಂಗಡಿಗೆ ಫಲಾನುಭವಿಗಳು ಬಂದು ಥಂಬ್ ಹಾಕಿ ಧಾನ್ಯ ಪಡೆಯಬೇಕು. ಯಾರಿಗೂ ಊರಿಗೆ ಹೋಗಿ ಹಂಚಿಕೆ ಮಾಡುವ ನಿಯಮವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಏಜೆನ್ಸಿ ಪಡೆದವರು ಹದ್ದಿನಾಳದಲ್ಲಿ ಹಂಚಿಕೆ ಮಾಡಿದ್ದು ನಮ್ಮೂರಿಗೆ ಮಾತ್ರ ಬರುತ್ತಿಲ್ಲ ಎಂದು ಇಂಗಳದಾಳ ಗ್ರಾಮಸ್ಥರು ಆರೋಪಿಸಿದ್ದಾರೆ. ಅವರಿಗೊಂದು ನ್ಯಾಯ ನಮಗೊಂದು ನ್ಯಾಯ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಾರಣವೇನು?
ಅಮರಾಪುರ ಕೇಂದ್ರ ಮಾಡಿಕೊಂಡು ಇಂಗಳದಾಳ, ಹದ್ದಿನಾಳ ಗ್ರಾಮಗಳ ಸುಮಾರು 350ಕ್ಕೂ ಹೆಚ್ಚು ಪಡಿತರ ಚೀಟಿದಾರರಿಗೆ ಒಂದೇ ಏಜೆನ್ಸಿಯಡಿ ಧಾನ್ಯ ವಿತರಣೆ ಗುತ್ತಿಗೆ ನೀಡಲಾಗಿದೆ. ಹಲವು ವರ್ಷಗಳಿಂದ ಮಾಲೀಕರು ಇಂಗಳದಾಳ, ಹದ್ದಿನಾಳಗೆ ತೆರಳಿ ಫಲಾನುಭವಿಗಳ ಥಂಬ್‌ಪಡೆದು ವಾಹನದಲ್ಲಿ ಧಾನ್ಯ ತಂದು ಹಂಚಿಕೆಮಾಡುತ್ತಿದ್ದರು. ಇಂಗಳದಾಳದಲ್ಲಿ 100 ಕಾರ್ಡ್, ಹದ್ದಿನಾಳದಲ್ಲಿ 120 ಹಾಗೂ ಅಮರಾಪುರದಲ್ಲಿ ಸುಮಾರು 125ಕ್ಕೂ ಹೆಚ್ಚು ಬಿಪಿಎಲ್, ಎಪಿಎಲ್ ಕಾರ್ಡ್ ಗಳಿವೆ. ಹೊಸ ಏಜೆನ್ಸಿ ಬಂದನಂತರ ಅಮರಾಪುರ ನ್ಯಾಯಬೆಲೆ ಕೇಂದ್ರಕ್ಕೆ ಬಂದು ತೆಗೆದುಕೊಂಡು ಹೋಗಬೇಕು ಎನ್ನುತ್ತಿದೆ. ಆದರೆ, ಊರಿನಲ್ಲಿ ವಯಸ್ಸಾದವರು, ವಾಹನವಿಲ್ಲದ ಬಡವರು ಹೆಚ್ಚಿದ್ದು 3-4 ಕಿಮೀ ನಡೆದುಕೊಂಡು ಬರಲು ಆಗಲ್ಲ. ನೀವೇ ಊರಿಗೆ ಬಂದು ಹಂಚಿಕೆ ಮಾಡುವಂತೆ ಒತ್ತಾಯಿಸಿದ್ದಾರೆ. ಇಬ್ಬರ ನಡುವಿನ ಈ ಹಗ್ಗ ಜಗ್ಗಾಟದಿಂದ ಧಾನ್ಯ ಹಂಚಿಕೆಯಾಗದೆ ಹಾಗೇ ಉಳಿದಿವೆ.
ಅಮರಾಪುರದಲ್ಲಿ ನ್ಯಾಯಬೆಲೆ ಅಂಗಡಿ ಇಲ್ಲ. ಶಾಲೆ, ದೇವಸ್ಥಾನ, ಖಾಸಗಿ ಜಾಗದಲ್ಲಿ ಪಡಿತರ ವಿತರಣೆ ಮಾಡುತ್ತಾರೆ. ಇಷ್ಟುದಿನ ಊರಿಗೆ ಬಂದು ಪಡಿತರ ನೀಡುತ್ತಿದ್ದರು. ಈಗ ಹದ್ದಿನಾಳಗೆ ಹಂಚಿ ನಮಗೆ ಅನ್ಯಾಯ ಮಾಡಿದ್ದಾರೆ. ಬಡವರು, ವಯಸ್ಸಾದವರು 3-4 ಕಿಮೀ ನಡೆದುಹೋಗಿ ಪಡಿತರ ತರಲು ಆಗಲ್ಲ. ಊರಿಗೆ ಬಂದು ಹಂಚಬೇಕು.
ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗೆ ಬಂದು ಥಂಬ್‌ಹಾಕಿ ಧಾನ್ಯ ಸ್ವೀಕರಿಸಬೇಕು. ಅಮರಾಪುರದಲ್ಲಿ ಕೇಂದ್ರವಿದ್ದು, ಇಷ್ಟುದಿನ ಏಜೆನ್ಸಿ ಪಡೆದವರು ಇಂಗಳದಾಳ, ಹದ್ದಿನಾಳಗೆ ಹೋಗಿ ಹಂಚುತ್ತಿದ್ದರು. ಹೊಸಬರು ನಿಯಮ ಪಾಲಿಸುತ್ತಿದ್ದಾರೆ. ಇಂಗಳದಾಳ ಫಲಾನುಭವಿಗಳ ಧಾನ್ಯ ಕೇಂದ್ರದಲ್ಲೇ ಉಳಿದಿವೆ. ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವೆ.