ಸಿಂಧನೂರಿನ ಗಂಗಾನಗರದಲ್ಲಿ ಸೋಮವಾರ ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ, ನಿರೀಕ್ಷಣಾಧಿಕಾರಿ ಸಂಗನಗೌಡ, ಸಿಬ್ಬಂದಿ ನಿಖಿಲ್, ಕವಿತಾ ಇತರರಿದ್ದರು.
ಸಿಂಧನೂರು: ಇಲ್ಲಿನ ಗಂಗಾನಗರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಆಶ್ರಯದಲ್ಲಿ ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ ಮಾತನಾಡಿ, ಸಾಂಕ್ರಾಮಿಕ ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಸೊಳ್ಳೆಗಳ ಕಡಿತದಿಂದ ಹೆಚ್ಚಾಗಿ ರೋಗಗಳು ಬರಲಿದ್ದು, ಮುಂಜಾಗ್ರತೆವಹಿಸಬೇಕು. ವಿಷಪೂರಿತ ಆಹಾರ ಸೇವನೆ, ಅಶುದ್ಧ ನೀರು ಕುಡಿಯುವುದರಿಂದ ವಾಂತಿ ಮತ್ತು ಭೇದಿಯಾಗಿ ದೇಹದಲ್ಲಿ ನೀರಿನ ಅಂಶ ಹಾಗೂ ಎಲೆಕ್ಟ್ರೋಲೈಟ್‌ಗಳು ವೇಗವಾಗಿ ಕಡಿಮೆಯಾಗುತ್ತವೆ. ಇದರಿಂದ ಪ್ರಮುಖವಾಗಿ ನಿರ್ಜಲೀಕರಣ ಉಂಟಾಗುತ್ತದೆ ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಸಂಗನಗೌಡ ಮಾತನಾಡಿ, ಕುಡಿವ ನೀರನ್ನು ಕುದಿಸಿ ಆರಿಸಿ ಸೋಸಿ ಕುಡಿಯಬೇಕು.ಕ್ಲೋರಿನೇಶನ್‌ನಿಂದ ಶುದ್ಧೀಕರಿಸಿದ ನೀರನ್ನು ಕುಡಿಯಬೇಕು. ನದಿಯ ನೀರನ್ನು ನೇರವಾಗಿ ಕುಡಿಯಬಾರದು. ಮನೆ ಸುತ್ತಲಿನಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದರು. ಪಿಎಚ್‌ಸಿ ಸಿಬ್ಬಂದಿ ನಿಖಿಲ್, ಕವಿತಾ, ಗಂಗಮ್ಮ, ಹುಲಿಗೆಮ್ಮ ಇದ್ದರು.