ಅರಕೇರಾ: ತಾಲೂಕಿನ ಜಾಗಟಗಲ್ ಸುಕ್ಷೇತ್ರದ ಐತಿಹಾಸಿಕ ಬೆಟ್ಟದ ಶ್ರೀ ಬಸವೇಶ್ವರ ಜಾತ್ರೋತ್ಸವ ಡಿ.8 ರಿಂದ 10ರವರೆಗೆ ವಿಜೃಂಭಣೆಯಿಂದ ಜರುಗಲಿದೆ.
ಸೋಮವಾರ ಬೆಳಗ್ಗೆ 6 ರಿಂದ ಬಸವೇಶ್ವರ ಮೂರ್ತಿಗೆ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಅಲಂಕಾರ ಪೂಜೆ ನಡೆಯಲಿದೆ. ರಾತ್ರಿ 9 ಗಂಟೆಗೆ ಮಸರಕಲ್ ಗ್ರಾಮದಿಂದ ಜಾಗಟಗಲ್‌ಗೆ ಬಾಸಿಂಗ ಪ್ರವೇಶಿಸಲಿದೆ. ಬೆಳಗಿನ ಜಾವದ ತನಕ ಪುರವಂತರಿಂದ ವಡವು, ವಚನ, ಭಕ್ತರಿಂದ ನಂದಿಕೋಲು ಕುಣಿತದ ಮೂಲಕ ಅದ್ದೂರಿಯಾಗಿ ಬಾಸಿಂಗ ಸೇವೆ ಜರುಗಲಿದೆ.
ಡಿ.9ರಂದು ಬೆಳಗಿನ ಜಾವ 4 ಗಂಟೆಗೆ ಪುಷ್ಪಾಲಂಕೃತ ಬಾಸಿಂಗವನ್ನು ಬಸವೇಶ್ವರ ಮೂರ್ತಿಗೆ ಸಕಲ ಮಂಗಳ ವಾದ್ಯ ಮೂಲಕ ಬನಗೌಡ ಕಸ್ಟಿ ಕುಟುಂಬದಿಂದ ಬಾಸಿಂಗ ಧರಿಸಲಾಗುತ್ತದೆ. ಬೆಳಗ್ಗೆ 7 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಹರಕೆಯ ಲಘು ರಥೋತ್ಸವ ನೆರವೇರಲಿದೆ.
ಡಿ.10ರಂದು ಬೆಳಗ್ಗೆ 6ಗಂಟೆಗೆ ಬಸವೇಶ್ವರ ಮೂರ್ತಿಗೆ ವಿಶೇಷ ಅಲಂಕಾರ ಪೂಜೆ ಮತ್ತು ಮಹಾ ಮಂಗಳಾರತಿ ನಡೆಯಲಿದೆ. ಸಂಜೆ ಕಳಸ ಇಳಿಸುವ ಮೂಲಕ ಜಾತ್ರಾ ಮಂಗಲ ಕಾರ್ಯ ಸಂಭ್ರಮದಿಂದ ಜರುಗಲಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.