ರಾಯಚೂರಿನ ಜಿಲ್ಲಾಧಿಕಾರಿಗಳ ಭವನದಲ್ಲಿ ಡಿಸಿ ಎಸ್. ಪೂವಿತಾ ಅಧ್ಯಕ್ಷತೆಯಲ್ಲಿ ಮಂಗಳವಾರ ಬಕ್ರೀದ್ ಹಬ್ಬದ ನಿಮಿತ್ತ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾ ಸಮಿತಿ ಸಭೆ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ, ಅಪರ ಜಿಲ್ಲಾಧಿಕಾರಿ ಶಿವಾನಂದ, ಎಎಸ್ಪಿ ಕುಮಾರಸ್ವಾಮಿ, ಪಿಡಿ ತಿಮ್ಮಪ್ಪ ಬಿರಾದಾರ, ಮಹಾನಗರ ಪಾಲಿಕೆಯ ಜೋನಲ್-01ರ ಉಪ ಆಯುಕ್ತ ಮಲ್ಲಿಕಾರ್ಜುನ, ಎಸಿ ಕಚೇರಿಯ ತಹಶೀಲ್ದಾರ್ ರಾಜಶೇಖರ, ಪಶು ಸಂಗೋಪಣೆ ಇಲಾಖೆ ಉಪ ನಿರ್ದೇಶಕ ಪೋನಾಮ್‌ಸಿಂಗ್, ಸಿಪಿಐ ಉಮೇಶ ಕಾಂಬಳೆ ಇದ್ದರು. 
ರಾಯಚೂರು

ಬಕ್ರೀದ್ ಹಬ್ಬದ ಜಿಲ್ಲಾ ಸಮಿತಿ ಸಭೆ

ಪ್ರಮುಖ ಮುಖ್ಯಾಂಶಗಳು

  • ಪ್ರಾಣಿಗಳ ಹತ್ಯೆ ತಡೆಗಟ್ಟಲು ಸೂಕ್ತ ಕ್ರಮ ವಹಿಸಿ- ಡಿಸಿ
  • ಜಿಲ್ಲಾ ಪೊಲೀಸ್ ಇಲಾಖೆ ಹದ್ದಿನಕಣ್ಣು
ರಾಯಚೂರು
ಜಿಲ್ಲೆಯಲ್ಲಿ ಬಕ್ರೀದ್ ಹಬ್ಬದ ದಿನಗಳಲ್ಲಿ ಅಕ್ರಮ ಒಂಟೆ ಹಾಗೂ ಗೋವುಗಳ ಹತ್ಯೆ ತಡೆಗಟ್ಟಲು ಸೂಕ್ತ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಎಸ್.ಪೂವಿತಾ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಭವನದಲ್ಲಿ ಮಂಗಳವಾರ ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಅಕ್ರಮ ಒಂಟೆ ಹಾಗೂ ಗೋವುಗಳ ಹತ್ಯೆ ತಡೆಗಟ್ಟಲು ಅಧಿಕಾರಿಗಳಿಗೆ ಜಿಲ್ಲಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದ ಆದೇಶ ಪಾಲನೆ ಮಾಡುವ ಮೂಲಕ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಸಾರ್ವಜನಿರಿಗೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಂದ ಜಾಗೃತಿ ಮೂಡಿಸಬೇಕು. ದನಕರುಗಳು ಮತ್ತು ಗೋವುಗಳ ಹತ್ಯೆ ನಿಷೇಧವಿದ್ದು, ಸರಕಾರದ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಮೇ. 28ರಿಂದ 3 ದಿನಗಳ ಕಾಲ ನಡೆಯುವ ಬಕ್ರೀದ್ ಹಬ್ಬದ ಪ್ರಯುಕ್ತ ಜಾನುವಾರು ಸಾಗಾಣಿಕೆ ಕಾಯಿದೆ 2006, ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯಿದೆ 1959, ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯಿದೆ 1960, ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣೆ ಅಧಿನಿಯಮ 1964, ವಧಾಗಾರ ನಿಯಮ 2001, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ-2020, ಕಾಲುನಡಿಗೆ ಮೂಲಕ ಪ್ರಾಣಿಗಳ ಸಾಗಾಣಿಕೆ ನಿಯಮ, ಮನೋರಂಜನೆಗಾಗಿ ಪ್ರದರ್ಶನ ಮಾಡುವ ಪ್ರಾಣಿಗಳ ನಿಯಮಗಳು 1973, ಪ್ರಾಣಿ ಹಿಂಸಾ ಪ್ರತಿಬಂಧಕ ನಿಯಮಗಳು 1978ರಡಿ ಎಲ್ಲಾ ವಯಸ್ಸಿನ ಆಕಳು, ಆಕಳ ಕರು, ಹೋರಿ ಮತ್ತು ಎತ್ತು ಹಾಗೂ 13 ವರ್ಷದೊಳಗಿನ ಕೋಣ ಮತ್ತು ಎಮ್ಮೆಗಳನ್ನು ಹತ್ಯೆ ನಡೆಸತಕ್ಕದ್ದಲ್ಲ. ಗರ್ಭವಿರುವ ಪ್ರಾಣಿಗಳನ್ನು ವಧೆ ಮಾಡುವಂತಿಲ್ಲ. 03 ತಿಂಗಳ ಕೆಳಗಿನ ವಯಸ್ಸಿನ ಪ್ರಾಣಿಗಳನ್ನು ವಧೆ ಮಾಡುವಂತಿಲ್ಲ. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದರು.

ಪ್ರತಿಯೊಂದು ಹೆದ್ದಾರಿಯಲ್ಲಿ ಇತರೆ ರಾಜ್ಯಗಳಿಂದ ಜಿಲ್ಲೆಗೆ ಪ್ರವೇಶಿಸುವ ಮತ್ತು ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ಸಾಗಿಸಲ್ಪಡುವ ಜಾನುವಾರುಗಳ ಕುರಿತು ನಿಗಾವಹಿಸಲು ಈಗಾಗಲೇ ಸ್ಥಾಪಿಸಲಾಗಿರುವ ಅರಕ್ಷಕ ಇಲಾಖೆಯ ಚೆಕ್ ಪೋಸ್ಟ್‌ಗಳಲ್ಲಿ ಪಶು ಸಂಗೋಪಣೆ ಇಲಾಖೆ ಮತ್ತು ಸಾರಿಗೆ ಇಲಾಖೆಯ ಸಿಬ್ಬಂದಿಗಳನ್ನು ದಿನದ 24ಗಂಟೆಗಳ ಕಾಲ ಕಡ್ಡಾಯವಾಗಿ ನಿಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು ಹಾಗೂ ಮುಖ್ಯಾಧಿಕಾರಿಗಳು ಬಕ್ರೀದ್ ಹಬ್ಬದ ಪ್ರಯುಕ್ತ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಲೇ ಮಾಡಲು ಸಾರ್ವಜನಿಕರ ಮನೆಯ ಬಾಗಿಲುಗಳಿಗೆ ಬರುವ ನಗರ ಸ್ಥಳೀಯ ಸಂಸ್ಥೆಗಳ ವಾಹನಗಳಿಗೆ ವ್ಯವಸ್ಥಿತವಾಗಿ ಸೋರಿಕೆಯಾಗದಂತೆ ಚೀಲಗಳಲ್ಲಿ ಕಟ್ಟಿ ನೀಡುವಂತೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಬೇಕು. ಘನತ್ಯಾಜ್ಯ ವಸ್ತು ವಿಲೇವಾರಿ ವಾಹನಗಳ ಮೂಲಕ ಈ ಕುರಿತು ಜಿಂಗಲ್ ಪ್ರಸಾರ ಮಾಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ, ಎಎಸ್ಪಿ ಕುಮಾರಸ್ವಾಮಿ, ಪಿಡಿ ತಿಮ್ಮಪ್ಪ ಬಿರಾದಾರ, ಮಹಾನಗರ ಪಾಲಿಕೆಯ ಜೋನಲ್-01ರ ಉಪ ಆಯುಕ್ತ ಮಲ್ಲಿಕಾರ್ಜುನ, ಎಸಿ ಕಚೇರಿಯ ತಹಶೀಲ್ದಾರ್ ರಾಜಶೇಖರ, ಪಶು ಸಂಗೋಪಣೆ ಇಲಾಖೆ ಉಪ ನಿರ್ದೇಶಕ ಪೋನಾಮ್‌ಸಿಂಗ್, ಸಿಪಿಐ ಉಮೇಶ ಕಾಂಬಳೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.