ರಾಯಚೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂಭಾಗದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ನಿಮಿತ್ತ ಜಾಗೃತಿ ಜಾಥಾಕ್ಕೆ ಎಸ್ಪಿ ಅರುಣಾಂಗ್ಶು ಗಿರಿ ಚಾಲನೆ ನೀಡಿದರು. ಡಿಎಚ್‌ಓ ಡಾ.ಸುರೇಂದ್ರ ಬಾಬು, ರಿಮ್ಸ್ ಪ್ರಾಚಾರ್ಯ ರಮೇಶ ಕೀರ್ತಿ, ಗುರುದತ್ತ, ಡಾ.ಶಿವಕುಮಾರ್, ಡಾ.ಶಾಕೀರ್ ಮೈನುದ್ದಿನ್, ಡಾ.ಗಣೇಶ, ಆರ್‌ಸಿಹೆಚ್ ಅಧಿಕಾರಿ ಡಾ. ನಂದಿತಾ ಇದ್ದರು. 
ರಾಯಚೂರು

ವಿಶ್ವ ರಕ್ತದಾನಿಗಳ ದಿನಾಚರಣೆ ನಿಮಿತ್ತ ಜಾಗೃತಿ ಜಾಥಾ

ಪ್ರಮುಖ ಮುಖ್ಯಾಂಶಗಳು

  • ಜನರು ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು-ಎಸ್ಪಿ ಅರುಣಾಂಗ್ಶುಗಿರಿ ಮನವಿ
ರಾಯಚೂರು ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ವಾಹನ ಸವಾರರು ಕಡ್ಡಾಯವಾಗಿ ಹೆಲೈಟ್ ಧರಿಸಿ ಸುರಕ್ಷಿತವಾಗಿ ವಾಹನ ಚಲಾಯಿಸಬೇಕು. ರಕ್ತದ ಅವಶ್ಯಕತೆ ಹೆಚ್ಚಿರುವುದರಿಂದ ಜನರು ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಹೇಳಿದರು.
ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂಭಾಗದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಪೊಲೀಸ್ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ನಿಮಿತ್ತ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ರಸ್ತೆ ಅಪಘಾತದಲ್ಲಿ ಅನೇಕರು ಮೃತಪಡುತ್ತಿದ್ದು, ಚಿಕಿತ್ಸೆ ವೇಳೆ ರಕ್ತದ ಕೊರತೆಯಿಂದ ಕೆಲವರು ಪ್ರಾಣ ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ವಿಶೇಷವಾಗಿ ಎ-ನೆಗೆಟಿವ್, ಬಿ-ನೆಗೆಟಿವ್ ಹಾಗೂ ಎಬಿ-ನೆಗೆಟಿವ್ ಸೇರಿದಂತೆ ಅಪರೂಪದ ರಕ್ತಗುಂಪು ಹೊಂದಿರುವವರು ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಬಹುದು. ನಾನು ಈಗಾಗಲೇ 60 ಬಾರಿ ರಕ್ತದಾನ ಮಾಡಿದ್ದೇನೆ. ಸಾರ್ವಜನಿಕರೂ ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಸುರೇಂದ್ರ ಬಾಬು ಮಾತನಾಡಿ, ಜಿಲ್ಲೆಯಲ್ಲಿ ರಕ್ತದಾನದ ಬಗ್ಗೆ ಜನರಲ್ಲಿ ಇನ್ನೂ ಸಮರ್ಪಕ ಜಾಗೃತಿ ಕೊರತೆಯಿದೆ. ರಕ್ತದಾನ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಬದಲಾಗಿ ದೇಹದಲ್ಲಿ ಹೊಸ ರಕ್ತಕಣಗಳ ಉತ್ಪತ್ತಿಯಾಗುವುದರಿಂದ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರುತ್ತದೆ. ರಕ್ತವಿಲ್ಲದೆ ಅನೇಕ ಜೀವಗಳನ್ನು ಉಳಿಸಲು ಸಾಧ್ಯವಿಲ್ಲ. ರಕ್ತದಾನ ಮಾಡಿದರೆ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಜನರು ಜಾಗೃತರಾಗಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸಬೇಕು ಎಂದರು.
ಈ ಸಂದರ್ಭದಲ್ಲಿ ರಿಮ್ಸ್ ಪ್ರಾಚಾರ್ಯ ರಮೇಶ ಕೀರ್ತಿ, ಗುರುದತ್ತ, ಡಾ.ಶಿವಕುಮಾರ್, ಡಾ.ಶಾಕೀರ್ ಮೈನುದ್ದಿನ್, ಡಾ.ಗಣೇಶ, ಆರ್‌ಸಿಹೆಚ್ ಅಧಿಕಾರಿ ಡಾ. ನಂದಿತಾ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.