ಮುದಗಲ್ ಸಮೀಪದ ಆನೆಹೊಸುರು ಗ್ರಾಮದಲ್ಲಿ ನಾಟಕೋತ್ಸವಕ್ಕೆ ತಾಪಂ ಮಾಜಿ ಅಧ್ಯಕ್ಷ ಡಿ.ಜಿ.ಗುರಿಕಾರ ತಬಲಾ ಬಾರಿಸುವ ಮೂಲಕ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ಅಮೀನಾಬಿ ಮೋದಿನಸಾಬ್, ಜಾನಪದ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀದೇವಿ ನಡುವಿನಮನಿ, ತಾಪಂ ಕೆಡಿಪಿ ಸದಸ್ಯ ಶರಣಪ್ಪ ಕಟಗಿ ಇತರರಿದ್ದರು.
ಮುದಗಲ್: ನಾಟಕ ಕಲೆ, ಕಲಾವಿದರನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ಡಿ.ಜಿ. ಗುರಿಕಾರ ಹೇಳಿದರು.
ಸಮೀಪದ ಆನೆಹೊಸೂರು ಗ್ರಾಮದಲ್ಲಿ ಭಾನುವಾರ ಮುದಗಲ್‌ನ ಅಶೋಕಗೌಡ ಸುರೇಂದ್ರಗೌಡ ಗೆಳೆಯರ ಬಳಗ, ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕ, ಶ್ರೀನಿವಾಸ ಜನ ಕಲ್ಯಾಣ ಟ್ರಸ್ಟ್ ಹಾಗೂ ಆನೆಹೊಸೂರು ಗ್ರಾಪಂ ಸಹಯೋಗದಲ್ಲಿ ಆಯೋಜಿಸಿದ್ದ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಟಿ.ವಿ., ಸಾಮಾಜಿಕ ಮಾಧ್ಯಮಗಳು ಬಂದ ನಂತರ ನಾಟಕಕ್ಕೆ ದೊಡ್ಡ ಪೆಟ್ಟು ಬಿದ್ದಂತಾಗಿದೆ. ನಾಟಕ ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಕಾದಂಬರಿ ಆಧಾರಿತ ನಾಟಕಗಳು ಜ್ಞಾನ ಹೆಚ್ಚಿಸುವುದರ ಜತೆಗೆ ನೈತಿಕ ಮೌಲ್ಯಗಳ ಮಹತ್ವ ತಿಳಿಸುವತ್ತವೆ ಎಂದರು. ಸೇವೆಯಿಂದ ನಿವೃತ್ತಗೊಂಡ ಪಾಲಾಕ್ಷಿ ಮೂಲಿಮನಿ, ಶಶಿಕಲಾ ಸುಗೂರು, ಅಮೀನಸಾಬ್ ಕರಡಿ, ಗದ್ದೆಪ್ಪ ನಾಯಕ ಅವರನ್ನು ಸನ್ಮಾನಿಸಲಾಯಿತು.
ಚಿತ್ರದುರ್ಗದ ಸಾಣೆಹಳ್ಳಿ ಶಿವ ಸಂಚಾರ ಕಲಾ ತಂಡದಿಂದ ಪ್ರದರ್ಶನಗೊಂಡ ಶಿವಯೋಗಿ ಸಿದ್ಧರಾಮೇಶ್ವರ ನಾಟಕ ಎಲ್ಲರ ಮೆಚ್ಚುಗೆ ಗಳಿಸಿತು. ಮುದಗಲ್ ಪುರಸಭೆ ಮಾಜಿ ಅಧ್ಯಕ್ಷ ಅಶೋಗೌಡ ಆದಾಪುರ, ಪ್ರಮುಖರಾದ ಶರಣಪ್ಪ ಆನೆಹೊಸೂರು, ಅಮರೇಶ ಉಳ್ಳಾಗಡ್ಡಿ, ಸಂಗಪ್ಪ ಭಾವಿಮನ, ಸಂಗಪ್ಪ ಅಂಗಡಿ, ಸಂಜೀವಪ್ಪ ಮೂಲಿಮನಿ, ಶಿವನಗೌಡ ಪಾಟೀಲ ರಾಮತ್ನಾಳ, ಹುಸೇನಸಾಬ್ ಕರ್ನಾಚಿ ಇತರರಿದ್ದರು.