ಸಿಂಧನೂರಿನಲ್ಲಿ ಶನಿವಾರ ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ರಾಮಕೃಷ್ಣ ಆಶ್ರಮ ಹಾಗೂ ತತ್ವಂ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶೇಷ ಪ್ರಬೋಧನಾ ಕಾರ್ಯಾಗಾರವನ್ನು ಒಕ್ಕೂಟದ ಗೌರವಾಧ್ಯಕ್ಷ ಡಾ.ಕೆ.ಶಿವರಾಜ ಉದ್ಘಾಟಿಸಿದರು. ತತ್ವಂ ಸಂಸ್ಥೆಯ ಪ್ರತಿನಿಧಿ ಪ್ರದೀಪ್ ನಟರಾಜ್, ರಾಮಕೃಷ್ಣ ವಿವೇಕಾನಂದ ಆಶ್ರಮದ ಸದಾನಂದ ಸ್ವಾಮೀಜಿ, ಡಾ. ಶಿವರಾಜ, ಸತೀಶ್ ಇತರರಿದ್ದರು.
ಸಿಂಧನೂರು: ಶಿಕ್ಷಕರು ಕೇವಲ ಪಾಠ ಬೋಧನೆಗೆ ಸೀಮಿತರಾಗದೆ, ಮೌಲ್ಯಾಧಾರಿತ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಮಾರ್ಗದರ್ಶಕರಾಗಬೇಕು. ಹೀಗಾಗಿ ಪ್ರಬೋಧನಾ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಗೌರವಾಧ್ಯಕ್ಷ ಡಾ.ಕೆ.ಶಿವರಾಜ ಹೇಳಿದರು.
ಸಹನಾ ಶಾಲೆಯ ಸಭಾಂಗಣದಲ್ಲಿ ಶನಿವಾರ ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ರಾಮಕೃಷ್ಣ ಆಶ್ರಮ ಹಾಗೂ ತತ್ವಂ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶೇಷ ಪ್ರಬೋಧನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಮಕ್ಕಳ ಕಲಿಕೆಯಲ್ಲಿ ಗಮನಾರ್ಹ ಬದಲಾವಣೆ ಕಾಣಬೇಕಿದೆ. ಹೀಗಾಗಿ ಅವರಿಗೆ ಪಠ್ಯದ ಜತೆಗೆ ಬದುಕು ಕಟ್ಟಿಕೊಳ್ಳುವ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ತತ್ವಂ ಸಂಸ್ಥೆಯ ಪ್ರತಿನಿಧಿ ಪ್ರದೀಪ್ ನಟರಾಜ್ ಮಾತನಾಡಿ, ಪ್ರತಿಯೊಬ್ಬ ಶಿಕ್ಷಕ ನಿರಂತರ ಹೊಸದನ್ನು ಕಲಿಯುತ್ತ, ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದಾಗ ಮಾತ್ರ ಸಮಾಜ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ವೈ. ನರೇಂದ್ರನಾಥ ಮಾತನಾಡಿ, ಈ ಕಾರ್ಯಾಗಾರದಿಂದ ಶಿಕ್ಷಕರು ಪಡೆದ ಜ್ಞಾನ, ಮೌಲ್ಯಗಳು ಹಾಗೂ ಬೋಧನಾ ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಮೂಲಕ ಕಾರ್ಯಕ್ರಮದ ಉದ್ದೇಶವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ತತ್ವಂ ಸಂಸ್ಥೆಯ ಪ್ರದೀಪ್ ನಟರಾಜ್ ಹಾಗೂ ಸ್ನೇಹಾ ಮಾಲ್ದೆ ಕಾರ್ಯಾಗಾರ ನಡೆಸಿಕೊಟ್ಟರು. 400ಕ್ಕೂ ಹೆಚ್ಚು ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ಸದಾನಂದ ಸ್ವಾಮೀಜಿ, ಡಾ. ಶಿವರಾಜ, ಸತೀಶ್, ಆರ್.ಸಿ. ಪಾಟೀಲ್, ವೀರೇಶ್ ಅಗ್ನಿ, ತನ್ವೀರ್, ಸರಸ್ವತಿ ಪಾಟೀಲ್ ಇತರರಿದ್ದರು.