ಲಿಂಗಸುಗೂರಿನಲ್ಲಿ ಎಸಿ ಬಸವಣೆಪ್ಪ ಕಲಶೆಟ್ಟಿಗೆ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಪತ್ರ ಸಲ್ಲಿಸಿತು. ಸಂಘದ ತಾಲೂಕು ಅಧ್ಯಕ್ಷ ಹಾಜಿಬಾಬು ಕಲ್ಯಾಣಿ, ಅಮರೇಶಪ್ಪ ಹೂನೂರು, ಅಮರೇಶ, ರಾಮಕೃಷ್ಣ, ಡಾ.ರುದ್ರಗೌಡ ಪಾಟೀಲ, ಅಬ್ದುಲ್ ರವೂಫ್ ಇತರರಿದ್ದರು.
ಲಿಂಗಸುಗೂರು: ತಾಲೂಕಿನ ಸರ್ಜಾಪುರ ಗ್ರಾಪಂ ಕಚೇರಿಗೆ ಬೀಗ ಹಾಕಿ ಪಿಡಿಒ ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದವರನ್ನು ಬಂಧಿಸಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕ ಘಟಕ ಸೋಮವಾರ ಎಸಿ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿತು.
ಸರ್ಜಾಪುರ ಗ್ರಾಪಂ ಕಚೇರಿಗೆ ಏ.3ರಂದು ಗ್ರಾಮದ 70ಕ್ಕೂ ಹೆಚ್ಚು ಜನ ಬಂದು ಯಾವುದೇ ಮಾಹಿತಿ ನೀಡದೆ ಬೀಗ ಹಾಕಿದ್ದಾರೆ. ಮರುದಿನ ಪಿಡಿಒ ಅವರು ಗ್ರಾಪಂ ಗೆ ಹಾಕಿದ್ದ ಬೀಗ ಮುರಿದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅದೇ ಗುಂಪು ಕಚೇರಿಗೆ ತೆರಳಿ ಪಿಡಿಒ ಶೋಭಾರಾಣಿಗೆ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಸಿಬ್ಬಂದಿಯ ಹೊರ ಹಾಕಿದ್ದಾರೆ. ಇಂತಹ ಪ್ರಕರಣಗಳು ಸರ್ಕಾರಿ ನೌಕರರು ಭಯದಿಂದ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಪಿಡಿಒ ಲಿಂಗಸುಗೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದವರನ್ನು ಬಂಧಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ಅಲ್ಲದೆ ಕೆಲ ಸಂಘಟನೆಗಳ ಗುಂಪುಗಳು ಸರ್ಕಾರಿ ಕಚೇರಿಗಳಿಗೆ ತೆರಳಿ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಇದರಿಂದ ನೌಕರರ ತೇಜೋವಧೆಯಾಗುತ್ತಿದ್ದು, ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇಂಥ ಘಟನೆಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹಾಜಿಬಾಬು ಕಲ್ಯಾಣಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಅಮರೇಶಪ್ಪ ಹೂನೂರು, ಶಿರಸ್ತೇದಾರ್ ಅಮರೇಶ, ಕಂದಾಯ ನಿರೀಕ್ಷಕ ರಾಮಕೃಷ್ಣ, ಡಾ.ರುದ್ರಗೌಡ ಪಾಟೀಲ್, ಆಹಾರ ನಿರೀಕ್ಷಕ ಅಬ್ದುಲ್ ರವೂಫ್, ತಾವರೆಪ್ಪ, ಮಾನಪ್ಪ ಬಡಿಗೇರ, ಅರ್ಜುನ್, ರಂಗಣ್ಣ ದೊಡ್ಡಮನಿ, ಪಿಡಿಒ ಶೋಭಾರಾಣಿ, ಪ್ರಭುಲಿಂಗ ಗದ್ದಿ, ಗಂಗಾಧರ ನಾಯಕ, ವೀರೇಶ ತೇರದಾಳ, ಹನುಮೇಶ, ಶೆಟ್ಟೆಪ್ಪ ನಾಯಕ, ಚಿದಾನಂದ, ಮಹ್ಮದ ಸಬಿಲ್ ಇತರರಿದ್ದರು.