ಮುದಗಲ್ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಶಾಸಕ ಮಾನಪ್ಪ ವಜ್ಜಲ್ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು. ಆಡಳಿತಾಧಿಕಾರಿ ಎಸಿ ಬಸವಣೆಪ್ಪ ಕಲಶೆಟ್ಟಿ, ಮುಖ್ಯಾಧಿಕಾರಿ ಪ್ರವೀಣ್ ಭೋಗಾರ್, ಮಸ್ಕಿ ವೃತ್ತ ನಿರೀಕ್ಷಕ ರಾಮಣ್ಣ ಜಲಗಾರ್, ಪುರಸಭೆ ವ್ಯವಸ್ಥಾಪಕ ಸುರೇಶ ಇದ್ದರು.
ಆರು ದಿನಕ್ಕೊಮ್ಮೆ ಸರಬರಾಜಿಗೆ ಕ್ರಮ
ಮುದಗಲ್: ಪಟ್ಟಣದ 23 ವಾರ್ಡ್‌ಗಳ ಜನರಿಗೆ 12 ದಿನಕ್ಕೊಮ್ಮೆ ಕುಡಿವ ನೀರು ಸರಬರಾಜು ಆಗುತ್ತಿದ್ದು, ಕೂಡಲೇ ಸಮಸ್ಯೆ ಬಗೆಹರಿಸಿ 6 ದಿನಕ್ಕೊಮ್ಮೆ ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು ಎಂದು ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶೇಷ ಸಭೆಯಲ್ಲಿ ಜೀವಜಲ ಸಮಸ್ಯೆ, ಅನುದಾನ ಹಾಗೂ ಬಗೆಹರಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಕುಡಿವ ನೀರಿನ ಮೇಲ್ವಿಚಾರಕರನ್ನಾಗಿ ಕೂಡಲೇ ರಂಗನಾಥ ತಳವಾರ ಅವರನ್ನು ನಿಯೋಜಿಸಿ ಆದೇಶಿಸಬೇಕೆಂದು ಸೂಚಿಸಿದರು.
ಪಟ್ಟಣದಲ್ಲಿ 164 ವಸತಿ ವಿನ್ಯಾಸಗಳಿವೆ. ಉದ್ಯಾನಗಳ ಜಾಗ ಅಕ್ರಮವಾಗಿ ಮಾರಾಟವಾಗಿರುವ ಬಗ್ಗೆ ದೂರುಗಳು ಬಂದಿದ್ದು, ಸರ್ಕಾರದ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ಅನ್ಯರ ಪಾಲಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಎಲ್ಲ ವಾರ್ಡ್‌ಗಳಲ್ಲಿ ಮೂಲಸೌಕರ್ಯ ಹಾಗೂ ಚರಂಡಿ ಸ್ವಚ್ಛತೆ, ಫಾಗಿಂಗ್ ಸೇರಿದಂತೆ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರದ್ದಾಗಿದ್ದು, ಅದನ್ನರಿತು ಕರ್ತವ್ಯ ನಿರ್ವಹಿಸಬೇಕು.
ರಸ್ತೆಯಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಿದ್ದು, ಗೋಶಾಲೆಗೆ ಸ್ಥಳಾಂತರಿಸಬೇಕು. ಅಲ್ಲದೆ ಬೀದಿ ನಾಯಿಗಳು ಮತ್ತು ಮಂಗಗಳನ್ನು ನಿಯಂತ್ರಿಸುವಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾಗಲು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಕುಡಿವ ನೀರು ಪೂರೈಕೆಗೆ 60 ಲಕ್ಷ ರೂ. ವೆಚ್ಚದಲ್ಲಿ 60 ಎಚ್‌ಪಿ ಮೋಟಾರ್ ಮತ್ತು ಇತ್ಯಾದಿ ಸಲಕರಣೆಗಳನ್ನು ಖರೀದಿಸಬೇಕು. ಕೆಕೆಆರ್‌ಡಿಬಿ ಯೋಜನೆಯಡಿ ಪಟ್ಟಣಕ್ಕೆ ಒಂದು ಕೋಟಿ ರೂ. ಅನುದಾನ ಕುಡಿವ ನೀರಿಗಾಗಿ ಮೀಸಲಿರಿಸಿದ್ದು, ತ್ವರಿತವಾಗಿ ಬಿಡುಗಡೆಗೊಳಿಸಲಾಗವುದು ಎಂದರು.
ಪುರಸಭೆಯಲ್ಲಿ ಖಾತಾ ನಕಲು, ಮುಟೇಷನ್, ಅಗತ್ಯ ದಾಖಲೆಗಳ ವಿಲೇವಾರಿ ವಿಳಂಬ ನೀತಿ ಅನುಸರಿಸುತ್ತಿರುವ ಸಿಬ್ಬಂದಿ ಮೇಲೆ ಶಾಸಕರು ರೇಗಾಡಿದರು. ಕೋಟೆ ಕಂದಕದ ಮುಂಭಾಗದಲ್ಲಿ ತ್ಯಾಜ್ಯ ನೀರು ಸಂಗ್ರಹವಾಗಿ ಸಾಂಕ್ರಾಮಿಕ ರೋಗಗಳ ಹರಡಲು ಕಾರಣವಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಪುರಸಭೆ ವ್ಯವಸ್ಥಾಪಕ ಸುರೇಶ್, ಕಂದಾಯ ನಿರೀಕ್ಷಕ ಅಂಥೋನಿ ರಾಜ್, ಕರವಸೂಲಿಗಾರ ವೀರೇಶ, ಸಿಬ್ಬಂದಿ ಆರಿಫುನ್ನಿಸಾಬೇಗಂ, ರಂಗನಾಥ ತಳವಾರ, ನಿಸಾರ್ ಅಲಿ, ಜಿಲಾನಿಪಾಷಾ, ಬಸವರಾಜ ಕೊಟ್ಟೂರು, ಬಸವರಾಜ್, ಚನ್ನಮ್ಮ, ಅಪ್ಸರ್ ಬೇಗ್, ಹಾಗೂ ಜೆಇ ಪ್ರಿಯಾಂಕಾ ಇತರರಿದ್ದರು.