ರಾಯಚೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮಕ್ಕೆ ನ್ಯಾಯಾಧೀಶರಾದ ಸಿದ್ದರಾಮಪ್ಪ ಕಲ್ಯಾಣ್ರಾವ್ ಚಾಲನೆ ನೀಡಿದರು. ಎಎಸ್ಪಿ ಜಿ.ಹರೀಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶರಣಮ್ಮ, ಪಿಎಸ್‌ಐ ಮಂಜುನಾಥ, ಪ್ರಮುಖರಾದ ಎಂ.ಡಿ.ಗೋಕುಲ್ ಹುಸೇನ, ವೆಂಕಟೇಶ ದೇಸಾಯಿ, ಸರಸ್ವತಿ,ಗಣೇಶ್ ಮಾಲಿ ಪಾಟೀಲ್, ಚಾಮರಾಜ, ಬಾವಸಲಿ,ಗಿರಿಜವ್ವ ಇದ್ದರು.
- ಇಂದಿಗೂ ಸಮಾಜದಲ್ಲಿ ಘೋರ ಅಪರಾಧಗಳು ಜೀವಂತ: ನ್ಯಾ.ಸಿದ್ದರಾಮಪ್ಪ
ರಾಯಚೂರು 21ನೇ ಶತಮಾನದಲ್ಲಿ ನಾವು ತಂತ್ರಜ್ಞಾನ, ವಿಜ್ಞಾನ ಮತ್ತು ಆರ್ಥಿಕತೆಯಲ್ಲಿ ಎಷ್ಟೇ ಮುನ್ನಡೆ ಸಾಧಿಸಿದ್ದರೂ, ಮಾನವೀಯತೆಯನ್ನು ತಲೆತಗ್ಗಿಸುವಂತೆ ಮಾಡುವ ಘೋರ ಅಪರಾಧವು ನಮ್ಮ ಸಮಾಜದಲ್ಲಿ ಇಂದಿಗೂ ಜೀವಂತವಾಗಿದೆಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರಾದ ಸಿದ್ದರಾಮಪ್ಪ ಕಲ್ಯಾಣ್ರಾವ್ ಹೇಳಿದರು.
ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಹಿಳಾ ಸಬಲೀಕರಣ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು. ಮಾನವ ಕಳ್ಳ ಸಾಗಾಣಿಕೆ ಪ್ರಮುಖ ಕಾರಣ ಬಡತನ ಮತ್ತು ನಿರುದ್ಯೋಗ ಉತ್ತಮ ಕೆಲಸ ಮತ್ತು ಹೆಚ್ಚಿನ ಆದಾಯದ ಆಮಿಷವೊಡ್ಡಿ ಗ್ರಾಮೀಣ ಹಾಗೂ ಬಡ ಕುಟುಂಬಗಳ ಮಹಿಳೆಯರನ್ನು ಸುಲಭವಾಗಿ ವಂಚಿಸಲಾಗುತ್ತದೆ. ಅದೇ ರೀತಿಯಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಅಕ್ರಮ ರಫ್ತು ಅಥವಾ ಸಾಗಾಣಿಕೆ ಮಾಡುವುದು ಶಿಕ್ಷಾರ್ಹ ಅಪರಾಧ.ಆಮಿಷ, ವಂಚನೆ, ಬೆದರಿಕೆ ಅಥವಾ ಬಲವಂತದ ಮೂಲಕ ಮಹಿಳೆಯರನ್ನು ಅವರ ಒಪ್ಪಿಗೆಯಿಲ್ಲದೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದೊಯ್ದು, ಅವರನ್ನು ಲೈಂಗಿಕ ಶೋಷಣೆ, ಜೀತದಾಳು ಕೆಲಸ, ಬಲವಂತದ ಮದುವೆ ಅಥವಾ ಅಂಗಾಅಗ ಮಾರಾಟಕ್ಕೆ ಒಳಪಡಿಸುವುದೇ ಮಹಿಳೆಯರ ಅಕ್ರಮ ಸಾಗಾಣಿಕೆಯಾಗಿದೆ ಎಂದರು.
ದೇಶದ ಪ್ರತಿಯೊಬ್ಬ ಪ್ರಜೆಗೂ ಮಾನವ ಕಳ್ಳ ಸಾಗಾಣಿಕೆಗೆ ವಿರೋಧಿಸಬೇಕು. ಪ್ರತಿಯೊಬ್ಬರೂ ತಮ್ಮ ಸುತ್ತ ಮುತ್ತ ಇಂತಹ ಚಟುವಟಿಕೆಗಳು ಕಂಡು ಬಂದರೆ ತಕ್ಷಣ ಪೋಲಿಸ್ ಇಲಾಖೆಯವರಿಗೆ ಮಾಹಿತಿ ನೀಡಬೇಕು. ಕಾನೂನಿನಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಇದೆ. ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆಗೆ ಸಹಕಾರ, ಪ್ರೋತ್ಸಾಹ ನೀಡುವವರಿಗೂ ಕಠಿಣ ಶಿಕ್ಷೆ ಇದೆ ಎಂದರು.
ಎಲ್ಲಾ ನಾಗರಿಕರು ಇಂತಹ ಚಟುವಟಿಕೆಗಳಿಂದ ಎತ್ತೇಚ್ಚುಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ. ಮಹಿಳೆ ಈ ಸಮಾಜದ ಕಣ್ಣು, ಆಕೆಗೆ ಗೌರವ, ಭದ್ರತೆ ಮತ್ತು ಸಮಾನ ಅವಕಾಶಗಳನ್ನು ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ, ಅಕ್ರಮ ಸಾಗಾಣಿಕೆಯಂತಹ ಕ್ರೂರ ಪಿಡುಗನ್ನು ಸಮಾಜದಿಂದ ಬೇರುಸಹಿತ ಕಿತ್ತೊಗೆಯಲು ನಾವೆಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.
ಎಎಸ್ಪಿ ಹರೀಶ ಜಿ., ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ಶಿಕ್ಷಾರ್ಹ ಅಪರಾಧವಾಗಿದೆ. ಮಾನವ ಕಳ್ಳ ಸಾಗಾಣಿಕೆ ವಿರೋಧಿಸುವುದು ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯವಾಗಿದೆ. ಮಹಿಳೆಯರ ಮತ್ತು ಮಕ್ಕಳ ಅನೈತಿಕ ಚಟುವಟಿಕೆಗಳು ನಿಮ್ಮ ಕಣ್ಣು ಮುಂದೆ ಬಂದರೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ನಮ್ಮ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿ ಅಥವಾ ತುರ್ತು ಪೋಲಿಸ್ ಸಹಾಯವಾಣಿ ಸಂಖ್ಯೆ 112 ಮತ್ತು ಮಹಿಳಾ ಸಹಾಯವಾಣಿ ಸಂಖ್ಯೆ 181ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದರು.
ಇಂದಿನ ಆಧುನಿಕ ಯುಗದಲ್ಲೂ ಮಹಿಳೆಯರನ್ನು ಹಾಗೂ ಹೆಣ್ಣುಮಕ್ಕಳನ್ನು ವಂಚನೆ, ಆಮಿಷ ಅಥವಾ ಬೆದರಿಕೆಯ ಮೂಲಕ ಜೀತದಾಳು ಕೆಲಸ, ಲೈಂಗಿಕ ಶೋಷಣೆ ಮತ್ತು ಅಕ್ರಮ ಚಟುವಟಿಕೆಗಳಿಗೆ ಬಲಿಪಶು ಮಾಡುತ್ತಿರುವುದು ಅತ್ಯಂತ ಶೋಚನೀಯ ಸಂಗತಿಯಾಗಿದೆ. ಬಡತನ, ನಿರುದ್ಯೋಗ ಇದರ ಕೊರತೆಯಿಂದ ಅಪರಾಧಿಗಳಿಗೆ ವರವಾಗುತ್ತಿದೆ. ಕೆಲಸದ ನೆಪದಲ್ಲಿ ಹಳ್ಳಿ ಹಾಗೂ ನಗರದ ಹೆಣ್ಣುಮಕ್ಕಳನ್ನು ಸುಲಭವಾಗಿ ಬಲೆಗೆ ಬೀಳಿಸಿಕೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶರಣಮ್ಮ, ಪಿಎಸ್‌ಐ ಮಂಜುನಾಥ, ಪ್ರಮುಖರಾದ ಎಂ.ಡಿ.ಗೋಕುಲ್ ಹುಸೇನ, ವೆಂಕಟೇಶ ದೇಸಾಯಿ, ಸರಸ್ವತಿ,ಗಣೇಶ್ ಮಾಲಿ ಪಾಟೀಲ್, ಚಾಮರಾಜ, ಬಾವಸಲಿ,ಗಿರಿಜವ್ವ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಇದ್ದರು.