ರಾಮತ್ನಾಳ ಗ್ರಾಮದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಎ.ವಸಂತಕುಮಾರ, ಜಿಪಂ ಮಾಜಿ ಸದಸ್ಯ ಅಸ್ಲಂಪಾಷಾ, ಮುಖಂಡರಾದ ಲಿಂಗರಾಜ ಎಸ್.ಹಂಚಿನಾಳ, ಅಶೋಕ ಉಮಲೂಟಿ, ಗ್ರಾಪಂ ಉಪಾಧ್ಯಕ್ಷ ಮೌನೇಶ ಇತರರಿದ್ದರು. 
ರಾಯಚೂರು

ಜನರ ಸಂವಿಧಾನದ ಹಕ್ಕು ಕಸಿಯುವ ಹುನ್ನಾರ

ಪ್ರಮುಖ ಮುಖ್ಯಾಂಶಗಳು

  • ವಿಕೇಂದ್ರೀಕರಣ
  • ವ್ಯವಸ್ಥೆಯಲ್ಲಿ
  • ರಾಜ್ಯ ಸರ್ಕಾರ
ಸಿಂಧನೂರು: ಮನರೇಗಾ ಕಾಯ್ದೆ ಬದಲಿಸಿ ವಿಬಿ ಜಿ ರಾಮ್‌ಜಿ ಕಾಯ್ದೆ ಜಾರಿಗೆ ಮುಂದಾಗಿರುವ ಕೇಂದ್ರದ ಬಿಜೆಪಿ ಸರ್ಕಾರ ಕಾರ್ಮಿಕರ ಹಾಗೂ ಗ್ರಾಪಂಗಳ ಸಂವಿಧಾನ ಬದ್ಧ ಹಕ್ಕು ಕಸಿದಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ತಾಲೂಕಿನ ರಾಮತ್ನಾಳ ಗ್ರಾಮದಲ್ಲಿ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್‌ನಿಂದ ಸೋಮವಾರ ಮನರೇಗಾ ಬಚಾವೋ ಆಂದೋಲನದ ಜನಸಂಪರ್ಕ ಸಭೆಯ ನೇತೃತ್ವವಹಿಸಿ ಮಾತನಾಡಿದರು.
ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳಿಗೆ ಅವಕಾಶ ನೀಡದೆ, ನೇರ ಆಡಳಿತಕ್ಕೆ ಕೇಂದ್ರ ಮುಂದಾಗಿದೆ. ಈ ಹಿಂದೆ ಮನರೇಗಾ ಅನುಷ್ಠಾನದಲ್ಲಿ ಗ್ರಾಪಂಗೆ ಅವಶ್ಯವಿರುವ ಕಾಮಗಾರಿ ಕೈಗೊಳ್ಳುವ ಅಧಿಕಾರವಿತ್ತು. ಆದರೀಗ ಕೇಂದ್ರ ಸರ್ಕಾರ ಆಯ್ಕೆ ಮಾಡಿದ ಮತ್ತು ಅವರು ಹೇಳಿದ ಕೆಲಸವನ್ನೇ ಪಂಚಾಯಿತಿ ಅನುಷ್ಠಾನ ಮಾಡಬೇಕಿದೆ. ಬಿಜೆಪಿ ಸರ್ಕಾರ ಜನರಿಗೆ ನೀಡಿದ್ದ ಅಧಿಕಾರಗಳನ್ನು ಕಸಿಯುತ್ತಿದೆ. ಎಲ್ಲ ಗ್ರಾಪಂ ಜನಪ್ರತಿನಿಧಿಗಳು ಜಾಗೃತರಾಗಬೇಕು. ತಿದ್ದುಪಡಿ ಕಾಯ್ದೆ ಅನುಷ್ಠಾನಗೊಳ್ಳುವ ಮೊದಲೇ ಜಾರಿ ಬಾರದಂತೆ ಸಾಮಾನ್ಯಸಭೆಯಲ್ಲಿ ಠರಾವು ಮಾಡಬೇಕು. ಕೇಂದ್ರ ಸರ್ಕಾರದ ಜನವಿರೋಧಿ ಕಾರ್ಯದ ವಿರುದ್ಧ ಹೋರಾಟ ತೀವ್ರಗೊಳಿಸಬೇಕು ಎಂದು ತಿಳಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಎ.ವಸಂತಕುಮಾರ ಮಾತನಾಡಿ, ಕೇಂದ್ರ ಸರ್ಕಾರ ಮನರೇಗಾ ಕಾಯ್ದೆ ತಿದ್ದುಪಡಿ ಮಾಡುವ ಭರದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ ಹೆಸರನ್ನೇ ಬದಲಾಯಿಸಿದೆ. ಜನರಿಗೆ ಗೊತ್ತಾಗದ ರೀತಿಯಲ್ಲಿ ಕಾಯ್ದೆಯನ್ನು ಸಿದ್ಧಪಡಿಸಿದೆ ಎಂದರು. ಜಿಪಂ ಮಾಜಿ ಸದಸ್ಯ ಅಸ್ಲಂಪಾಷಾ, ಮುಖಂಡರಾದ ಲಿಂಗರಾಜ ಎಸ್.ಹಂಚಿನಾಳ, ಅಶೋಕ ಉಮಲೂಟಿ, ಗ್ರಾಪಂ ಉಪಾಧ್ಯಕ್ಷ ಮೌನೇಶ ಮಾತನಾಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ ಇಟಗಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗಪ್ಪ ಧಡೇಸೂಗೂರು, ನಗರ ಘಟಕ ಅಧ್ಯಕ್ಷ ಖಾಜಿಮಲಿಕ್, ಜಿ.ಪಂ.ಮಾಜಿ ಸದಸ್ಯ ಶಿವನಗೌಡ ಎಲೆಕೂಡ್ಲಿಗಿ, ಶ್ರೀನಿವಾಸ, ಆರ್.ತಿಮ್ಮಯ್ಯ ನಾಯಕ, ರೆಡ್ಡೆಪ್ಪಗೌಡ ರಾಮತ್ನಾಳ, ಶ್ರೀದೇವಿ ಶ್ರೀನಿವಾಸ, ಮಲ್ಲಿಕಾರ್ಜುನ ನಾಡಗೌಡ ಇತರರಿದ್ದರು.