ಸಿಂಧನೂರಿನಲ್ಲಿ ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆ ತಾಲೂಕು ಘಟಕ ಪ್ರತಿಭಟನಾ ಮೆರವಣಿಗೆ ನಡೆಸಿತು. ಪ್ರಮುಖರಾದ ಗುರುರಾಜ ಮುಕ್ಕುಂದ, ಅಶೋಕ ಮೇಗಳಮನಿ, ಸೋಮನಾಥ ಸೂಲಂಗಿ, ಪಾಮಯ್ಯ ಹೊಸಳ್ಳಿ, ಮಂಜುನಾಥ ಬಾದರ್ಲಿ ಇತರರಿದ್ದರು. 
ರಾಯಚೂರು

ಭೂರಹಿತ ರೈತರಿಗೆ ಜಮೀನು ಹಂಚಿಕೆ ಮಾಡಿ

ಪ್ರಮುಖ ಮುಖ್ಯಾಂಶಗಳು

  • ಜಮೀನು ಹಂಚಿಕೆ
  • ಭೂರಹಿತ ರೈತ
  • ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆ
  • ಪ್ರತಿಭಟನಾ ಮೆರವಣಿಗೆ

ಭೂರಹಿತ ರೈತರಿಗೆ ಜಮೀನು ಹಂಚಿಕೆ ಮಾಡಿ

ಸಿಂಧನೂರು: ತಾಲೂಕಿನಲ್ಲಿ ಭೂರಹಿತ ರೈತರಿಗೆ ಜಮೀನು ಹಂಚಿಕೆ ಮತ್ತು ನಿವೇಶನ ರಹಿತರಿಗೆ ನಿವೇಶನ, ಮನೆ ನಿರ್ಮಿಸಿ ಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜರತ್ನ ರಕ್ಷಣಾ ವೇದಿಕೆ ತಾಲೂಕು ಘಟಕ ಶುಕ್ರವಾರ ಸ್ಥಳೀಯ ಪ್ರವಾಸಿ ಮಂದಿರದಿಂದ ತಾಲೂಕು ಆಡಳಿತಸೌಧವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿತು.
ಪರಂಪೋಕು, ಗೈರಾಣಾ, ಗಾಂವಠಾಣಾ ಹೆಚ್ಚುವರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ಭೂಹೀನರಿಗೆ ಜಮೀನು ಮಂಜೂರು ಮಾಡಲು ಫಾರ್ಮ್ ನಂ.51, 53, 57 ಮತ್ತು 94ಸಿ ಅರ್ಜಿಗಳನ್ನು ಸಲ್ಲಿಸುವಂತೆ ಸರ್ಕಾರ ಆದೇಶಿಸಿದೆ. ಆದರೆ, ಸಲ್ಲಿಸಿದ ಅರ್ಜಿಗಳ ಪೈಕಿ ತಾಲೂಕಿನ 627 ಅರ್ಜಿಗಳನ್ನು ತಿರಸ್ಕರಿಸಿರುವುದು ಖಂಡನೀಯ.
ಕಂದಾಯ ಇಲಾಖೆ ಅಧಿಕಾರಿಗಳು ಪಂಚನಾಮೆ ಸಂದರ್ಭದಲ್ಲಿ ಭೂ ರಹಿತರ ಹೆಸರು ಕೈಬಿಟ್ಟು, ಪಟ್ಟಭದ್ರಹಿತಾಸಕ್ತಿಗಳ ಹೆಸರು ಸೇರಿಸಿ ಅರ್ಹರಿಗೆ ಅನ್ಯಾಯ ಮಾಡಿದ್ದಾರೆ. ಆದ್ದರಿಂದ ಕೂಡಲೇ ಪ್ರಭಾವಿಗಳ ಕಪಿಮುಷ್ಠಿಯಲ್ಲಿ ಒತ್ತುವರಿಯಾದ ಜಮೀನು ತೆರವು ಮಾಡುವಂತೆ ಆಗ್ರಹಿಸಿದರು. ಸಿಂಧನೂರು ನಗರಸಭೆ ವ್ಯಾಪ್ತಿಯ ವಾರ್ಡ್ ನಂ.14, 15, 17 ಮತ್ತು 19ರ 40ನೇ ಉಪಕಾಲುವೆಗೆ ಹೊಂದಿಕೊಂಡು ನೂರಾರು ಬಡವರು ಶೆಡ್ ಮತ್ತು ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ.
ಹಕ್ಕುಪತ್ರ ವಿತರಣೆಗಾಗಿ ಕಳೆದ 40 ವರ್ಷಗಳಿಂದ ಹೋರಾಡುತ್ತಿದ್ದರೂ ನಗರಸಭೆ ಪೌರಾಯುಕ್ತರು, ಶಾಸಕರು ಸ್ಪಂದಿಸುತ್ತಿಲ್ಲ. ಹಕ್ಕುಪತ್ರ ವಿತರಣೆಗೆ ಕೂಡಲೇ ಕ್ರಮ ವಹಿಸದಿದ್ದರೆ ನಗರಸಭೆ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ ಗುರುರಾಜ ಮುಕ್ಕುಂದ, ಗೌರವಾಧ್ಯಕ್ಷ ಅಶೋಕ ಮೇಗಳಮನಿ, ಜಿಲ್ಲಾಧ್ಯಕ್ಷ ಸೋಮನಾಥ ಸೂಲಂಗಿ, ಯುವ ಘಟಕದ ಅಧ್ಯಕ್ಷ ಪಾಮಯ್ಯ ಹೊಸಳ್ಳಿ, ತಾಲೂಕು ಅಧ್ಯಕ್ಷ ಮಂಜುನಾಥ ಬಾದರ್ಲಿ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ದುರುಗೇಶ ಬಾಲಿ, ಸದಸ್ಯರಾದ ಮಹಾನಂದಮ್ಮ, ಅನ್ನಪೂರ್ಣಾ, ವಿಜಯಕುಮಾರ, ರೇಣುಕಮ್ಮ, ಶಿವಮ್ಮ, ರಮೇಶ ಬಸಾಪುರ ಇದ್ದರು.