ರಾಯಚೂರಿನ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಅಕ್ಕ ಕೆಫೆಹೊರನೋಟ.
- ಜಿಲ್ಲಾಧ್ಯಂತ 10 ಕೆಫೆಗಳ ನಿರ್ಮಾಣ
- ಜಿಪಂನಿಂದ ಅನುದಾನ ಮಂಜೂರು
- ರಾಜ್ಯ ಸರ್ಕಾರವು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ
ರಾಯಚೂರು ರಾಜ್ಯ ಸರ್ಕಾರವು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಅಡಿ ಮಹಿಳೆಯರ ಸಾಮಾಜಿಕ, ಆರ್ಥಿಕ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರವು ಅಕ್ಕ ಕೆಫೆ ಸ್ಥಾಪನೆಯ ಗುರಿ ಹೊಂದಿದೆ. ಅಕ್ಕ ಕೆಫೆ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಕೈಗೆಟುಕುವ ಬೆಲೆಯಲ್ಲಿ ಆಹಾರ ಒದಗಿಸುವ ಯೋಜನೆ ಹೊಂದಿದೆ.
ಜಿಲ್ಲೆಯ ಮಹಿಳೆಯರ ಸ್ವಾವಲಂಬಿ ಬದುಕು, ಆರ್ಥಿಕ ಸಬಲೀಕರಣಕ್ಕೆ ಜಿಲ್ಲಾ ಪಂಚಾಯಿತಿ ಮತ್ತೊಂದು ಹೆಜ್ಜೆ ಇರಿಸಿದ್ದು ಜಿಲ್ಲೆಯಲ್ಲಿ ಅಕ್ಕ ಕೆಫೆ ಹೋಟೆಲ್‌ಗಳ ನಿರ್ಮಿಸಿ ಕೊಡಲು ಮುಂದಾಗಿದೆ. ಅಕ್ಕ ಕೆಫೆ ನಾಮಬಲದರೊಂದಿಗೆ ಜಿಲ್ಲೆಯಲ್ಲಿ ವಿವಿಧ ಸ್ವಸಹಾಯ ಸಂಘ, ಸಮಾಜದಲ್ಲಿ ನಿರ್ಲಕ್ಷಕ್ಕೆ ಒಳಪಟ್ಟ ತೃತೀಯ ಲಿಂಗಿಗಳ ಬದುಕು ಹಸನದ ಜೊತೆಗೆ ಸ್ವಾವಲಂಬಿತನಕ್ಕೆ ಒತ್ತು ನೀಡಲು ಜಿಲ್ಲಾ ಪಂಚಾಯಿತಿ ಬಲ ತುಂಬಲು ಹೊರಟಿದೆ.
ಮಹಿಳೆಯರ ಸ್ವಾವಲಂಬಿ ಬದುಕು ನಿರ್ಮಾಣ ಮಾಡಿಕೊಳ್ಳಲು ಜಿಲ್ಲಾ ಪಂಚಾಯಿತಿಯಿಂದ ಈಗಾಗಲೇ ರಾಯಚೂರಿನ ತಾಯಿ ಮಕ್ಕಳ ಆಸ್ಪತ್ರೆ,ಲಿಂಗಸೂಗೂರಿನಲ್ಲೂ ಅಕ್ಕ ಕೆಫೆ ಆರಂಭಗೊಂಡಿದ್ದು, ಮುಂಬರುವ ದಿನಗಳಲ್ಲಿ ರಾಯಚೂರಿನ ಜಿಲ್ಲಾಡಳಿತ ಭವನದಲ್ಲಿ, ಜಿಪಂ ಕಚೇರಿ, ಮಹಾನಗರ ಪಾಲಿಕೆ, ಮಹರ್ಷಿ ವಾಲ್ಮೀಕಿ ವೃತ್ತದ ಬಳಿ, ದೇವದುರ್ಗದ ತಾ.ಪಂ.ಕಚೇರಿ, ಸಿಂಧನೂರಿನ ಬಸ್ ನಿಲ್ದಾಣ ಬಳಿ, ಮಾನ್ವಿಯ ತಾ.ಪಂ.ಕಚೇರಿ ಆವರಣ ಮತ್ತು ಮಸ್ಕಿಯ ತಹಶೀಲ್ ಕಚೇರಿ ಆವರಣದಲ್ಲಿ ಕೆಫೆ ಆರಂಭದ ಅಂತಿಮ ಸಿದ್ಧತೆಗಳು ಆರಂಭವಾಗಿವೆ. ಜಿಪಂ ಕಚೇರಿ ಪ್ರಾಂಗಣದಲ್ಲಿ ಕೆಫೆ ಸಿದ್ದಗೊಂಡಿದ್ದು, ತೃತೀಯ ಲಿಂಗಿಗಳಿಗೆ ನೀಡಲು ಉದ್ದೇಶಿಸಲಾಗಿದೆ.
ಅಲ್ಲಲ್ಲಿ ಸಣ್ಣ ಪುಟ್ಟ ಕೆಲಸಗಳು ಪ್ರಗತಿಯಲ್ಲಿದ್ದು, ಬಹುತೇಕ ಕೆಪೆಗಳುಆಗಸ್ಟ್‌ನೊಳಗೆ ಜಿಲ್ಲೆಯ ಎಲ್ಲ ಕಡೆಗೂ ಅಕ್ಕ ಕೆಫೆ ಕಾರ್ಯಾರಂಭಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಅಕ್ಕ ಕೆರೆ ಪ್ರಾರಂಭ ಮಾಡಲು ಅಗತ್ಯವಿರುವ ಅಡುಗೆ ಒಲೆ, ಸ್ಟವ್, ಟೇಬಲ್, ಕುರ್ಚಿ, ಫ್ರಿಜ್ ಸೇರಿ ನಾನಾ ಸಾಮಾಗ್ರಿಗಳನ್ನು ಜಿಪಂ ವಿನ್ಯಾಸಗೊಳಿಸಿರುವ ಮಾದರಿಯಲ್ಲಿ ಕ್ಯಾಂಟೀನ್ ಸಿದ್ದಪಡಿಸಿ ಮಹಿಳಾ ಸ್ವ ಸಹಾಯ ಸಂಘಗಳಿಗೆ ನೀಡಲಾಗುತ್ತಿದೆ. 4 ಸಾವಿರ ಚದರ ಅಡಿಗಿಂತ ಹೆಚ್ಚು ಜಾಗದಲ್ಲಿ ಕ್ಯಾಂಟೀನ್ ಆರಂಭಕ್ಕೆ ಸುಮಾರು 15 ಲಕ್ಷ ರೂ. ಮತ್ತು 4000 ಚದರ ಅಡಿಗಿಂತ ಕಮ್ಮಿ ಜಾಗದಲ್ಲಿದ್ದರೆ 10 ಲಕ್ಷ ರೂ. ಸಹಾಯಧನ ಕೊಡಲಾಗುತ್ತಿದೆ. ಅಗತ್ಯವಿದ್ದರೆ ಜಿಲ್ಲಾ ಪಂಚಾಯಿತಿ ಸಹಿತ ನೆರವು ನೀಡುತ್ತಿದೆ. ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಗಳಿಂದ ಕೆಫೆ ನಡೆಸುವವರಿಗೆ ತರಬೇತಿಯನ್ನೂ ಜಿಲ್ಲಾ ಪಂಚಾಯಿತಿಯೇ ಕೊಡಿಸಲಾಗುತ್ತಿದೆ.
ಜಿಲ್ಲೆಯಲ್ಲಿ ನಿರ್ಮಿಸಲಾಗುತ್ತಿರುವ ಅಕ್ಕ ಕೆಫೆಯ ಸಂಪೂರ್ಣ ಜವಾಬ್ದಾರಿಯನ್ನು ವಿಶೇಷ ವರ್ಗದ ಸ್ವ-ಸಹಾಯ ಸಂಘದ ಮಹಿಳೆಯರಿಗೆ, ಎಸ್‌ಸಿ, ಎಸ್‌ಟಿ, ಒಬಿಸಿ ವರ್ಗದವರಿಗೆ ವಿಕಲಚೇತನ, ತೃತೀಯ ಲಿಂಗಿಗಳಿಗೂ ಬದುಕು ಕಟ್ಟಿಕೊಳ್ಳಲು ಈ ಮೂಲಕ ಜವಾಬ್ದಾರಿ ನೀಡಲು ಸಿದ್ಧತೆಯಾಗಿದೆ. ಸದ್ಯ ಮಹಿಳಾ ಸ್ವಸಹಾಯ ಮಹಿಳಾ ಸಂಘದ ವಿಶೇಷ ವರ್ಗದವರು ಮುಂದೆ ಬಂದಿದ್ದಾರೆ. ಆದರೆ, ತೃತೀಯ ಲಿಂಗಿಗಳಲ್ಲಿ ವಿಶ್ವಾಸ ತುಂಬಿ ಅವರಿಗೂ ಯಾವುದಾದರೂ ಒಂದು ಅಕ್ಕ ಕೆಫೆಯ ಹೊಣೆಗಾರಿಕೆ ನೀಡುವ ಚಿಂತನೆ ಜಿ.ಪಂ ಅಧಿಕಾರಿಗಳು ಆರಂಭಿಸಿದ್ದಾರೆ.
ಇದರ ಜತೆಗೆ ಅಕ್ಕ ಕೆಪೆಯಲ್ಲಿ ಮಾಂಸಾಹಾರ ಮತ್ತು ಸಸ್ಯಾಹಾರ ಎರಡಕ್ಕೂ ಆದ್ಯತೆ ಕೊಡಲಾಗುತ್ತಿದೆ. ಜಿಲ್ಲೆಯ ಹತ್ತು ಕೆಫೆಗಳ ಪೈಕಿ ಸಿಂಧನೂರಿನ ಕೆಫೆ ಕೇವಲ ಸಸ್ಯಾಹಾರಕ್ಕೆ ಮೀಸಲಿರಿಸಿದ್ದಾಗಿ ಗೊತ್ತಾಗಿದೆ. ಉಳಿದಂತೆ ಪ್ರತಿ ದಿನ ಬೇರೆ ಬೇರೆ ಬಗೆಯ ಉಪಾಹಾರ, ಚಹಾ, ಕಾಫಿ, ಹಾಲು, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ.
ನಗರ ಸೇರಿದಂತೆ ಜಿಲ್ಲಾಧ್ಯಂತ ಸರ್ಕಾರಿ ಕಚೇರಿ ಹಾಗೂ ಜಾಗದಲ್ಲಿ ಜಿಪಂ ಅನುದಾನದಲ್ಲಿ ಅಕ್ಕ ಕೆಫೆಯನ್ನು ಪ್ರಾರಂಭ ಮಾಡಲಾಗುತ್ತಿದೆ. ಸದ್ಯ ಲಿಂಗಸುಗೂರು ಹಾಗೂ ರಾಯಚೂರಿನ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಪ್ರಾರಂಭವಾಗಿದ್ದು,
ಶೀಘ್ರವಾಗಿ ವಿವಿಧ ತಾಲೂಕಿನಲ್ಲಿ ಪ್ರಾರಂಭಿಸಲಾಗುತ್ತದೆ.
ಈಶ್ವರ ಕುಮಾರ ಕಾಂದೊ ಸಿಇಓ ಜಿಪಂ ರಾಯಚೂರು