ಮಾನ್ವಿಯಲ್ಲಿ ಅಕ್ಕ ಕೆಫೆಯನ್ನು ಎಂಎಲ್ಸಿ ಎನ್.ಎಸ್.ಬೋಸರಾಜು ಉದ್ಘಾಟಿಸಿದರು. ಶಾಸಕ ಹಂಪಯ್ಯನಾಯಕ, ಪ್ರಮುಖರಾದ ಕೆ.ಶರಣಯ್ಯ ನಾಯಕ, ಬಾಲಸ್ವಾಮಿ ಕೊಡ್ಲಿ, ಸಣ್ಣ ಬಸನಗೌಡ ಇತರರಿದ್ದರು.  
ರಾಯಚೂರು

ಸ್ವಾವಲಂಬಿ ಬದುಕಿಗೆ ಅಕ್ಕ ಕೆಫೆ ಸಹಕಾರಿ

ಪ್ರಮುಖ ಮುಖ್ಯಾಂಶಗಳು

  • ಎಂಎಲ್ಸಿ ಎನ್.ಎಸ್.ಬೋಸರಾಜು ಹೇಳಿಕೆ
  • ಮಾನ್ವಿ ಅಕ್ಕ ಕೆಫೆ ಉದ್ಘಾಟನೆ
ಮಾನ್ವಿ; ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಸ್ವಾವಲಂಬಿ ಬದುಕು ಸಾಗಿಸಲು ಅಕ್ಕ ಕೆಫೆ ಸಹಕಾರಿಯಾಗಲಿದೆ ಎಂದು ಎಂಎಲ್ಸಿ ಎನ್.ಎಸ್.ಬೋಸರಾಜು ಹೇಳಿದರು.
ಹಳೆಯ ತಾಪಂ ಕಚೇರಿ ಆವರಣದಲ್ಲಿ ಅಕ್ಕ ಕೆಫೆ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಮನೆಯಲ್ಲಿದ್ದು ಕುಟುಂಬದ ಜವಾಬ್ದಾರಿಗಳಿಗೆ ಸೀಮಿತವಾಗದೆ, ಸ್ವಂತ ಉದ್ಯಮ ನಡೆಸಿ ಸ್ವಾವಲಂಬಿ ಜೀವನ ನಡೆಸಬೇಕು. ರಾಜ್ಯ ಸರ್ಕಾರ ಅಕ್ಕ ಕೆಫೆ ಯೋಜನೆಯನ್ನು ಜಾರಿಗೆ ತಂದಿದ್ದು, ಯೋಜನೆಯಿಂದ ತಾಲೂಕಿನ ಮಹಿಳಾ ಸ್ವಸಹಾಯ ಸಂಘಗಳಿಗೆ ಮಾರುಕಟ್ಟೆ ಹಾಗೂ ಉದ್ಯೋಗಾವಕಾಶ ದೊರೆಯಲಿದೆ. ಸ್ಥಳೀಯವಾಗಿ ತಯಾರಿಸುವ ಆಹಾರ ಪದಾರ್ಥಗಳು, ಉಪಾಹಾರ ಹಾಗೂ ಪಾನೀಯಗಳ ಮಾರಾಟದ ಮೂಲಕ ಮಹಿಳೆಯರಿಗೆ ಹೆಚ್ಚಿನ ಆದಾಯ ಗಳಿಸಲು ಅವಕಾಶ ಸಿಗಲಿದೆ. ಮಹಿಳೆಯರ ಕೌಶಲವನ್ನು ಉದ್ಯಮವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕಾಗಿದೆ ಎಂದು ತಿಳಿಸಿದರು.
ಶಾಸಕ ಹಂಪಯ್ಯ ನಾಯಕ ಮಾತನಾಡಿ, ಸರ್ಕಾರದ ಮಹಿಳಾ ಸಬಲೀಕರಣದ ಆಶಯವನ್ನು ಸ್ಥಳೀಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಅಕ್ಕ ಕೆಫೆ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ನಯೋಪ್ರಾ ಅಧ್ಯಕ್ಷ ಅಬ್ದುಲ್ ಗಫೂರಸಾಬ್, ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಬಿ.ಕೆ.ಅಮರೇಶಪ್ಪ, ತಾಪಂ ಇಒ ಖಾಲಿದ್ ಅಹಮ್ಮದ್, ಪ್ರಮುಖರಾದ ಕೆ.ಶರಣಯ್ಯ ನಾಯಕ, ಬಾಲಸ್ವಾಮಿ ಕೊಡ್ಲಿ, ಸಣ್ಣ ಬಸನಗೌಡ, ರಾಜಾ ಸುಭಾಶ್ಚಂದ್ರ ನಾಯಕ, ಆರ್‌ಎಲ್‌ಎಂ ಅಧ್ಯಕ್ಷೆ ಮೌನೇಶ್ವರಿ, ರೇಣುಕಾ, ಪದ್ಮಾವತಿ ಇತರರಿದ್ದರು.