ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಜಿಲ್ಲೆಯ 50ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ, ವಿಲೀನಗೊಳಿಸುವ ಪ್ರಕ್ರಿಯೆಯನ್ನು ತಕ್ಷಣ ಕೈಬಿಡಬೇಕೆಂದು ಒತ್ತಾಯಿಸಿ ರಾಯಚೂರಿನಲ್ಲಿ ಎಐಡಿಎಸ್‌ಓ ಹಾಗೂ ಸಾರ್ವಜನಿಕ ಶಾಲೆ ಉಳಿಸಿ ಸಮಿತಿಯ ವತಿಯಿಂದ ಬುಧವಾರ ಪ್ರತಿಭಟನೆ ಮಾಡಿದರು. ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾಧ್ಯಕ್ಷ ಭುಜಪ್ಪ, ಸದಸ್ಯರಾದ ರಂಗನಾಥ, ವೀರಭದ್ರಯ್ಯ, ಮಹೇಂದ್ರ ಸಿಂಗ್, ಅಣ್ಣಪ್ಪ, ಚನ್ನಬಸವ ಜಾನೇಕಲ್, ಮಹೇಶ್, ವೀರೇಶ್, ಗಾಣದಾಳ ಗ್ರಾಮದ ರಂಗೇಶ್, ನಾಗರಾಜ್ ನಾಯಕ, ಸತ್ಯಪ್ಪ, ಜಿ. ಹನುಮಂತು, ನಜೀರ್ ಸಾಬ್, ನರಸಣ್ಣ, ಗೋವಿಂದಪ್ಪ, ಸಿ. ಮಲ್ಲೇಶ್ ಇದ್ದರು. 
ರಾಯಚೂರು

ಕೆಪಿಎಸ್ ಮ್ಯಾಗ್ನೆಟ್ ಪ್ರಾರಂಭಿಸದಂತೆ ಒತ್ತಾಯಿಸಿ ಎಐಡಿಎಸ್‌ಓ ಪ್ರತಿಭಟನೆ

ರಾಯಚೂರು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಜಿಲ್ಲೆಯ 50ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ, ವಿಲೀನಗೊಳಿಸುವ ಪ್ರಕ್ರಿಯೆಯನ್ನು ತಕ್ಷಣ ಕೈಬಿಡಬೇಕೆಂದು ಒತ್ತಾಯಿಸಿ ಎಐಡಿಎಸ್‌ಓ ಹಾಗೂ ಸಾರ್ವಜನಿಕ ಶಾಲೆ ಉಳಿಸಿ ಸಮಿತಿಯ ವತಿಯಿಂದ ಬುಧವಾರ ಪ್ರತಿಭಟನೆ ಮಾಡಿದರು.
ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಯೋಜನೆಯು ಗ್ರಾಮೀಣ ಹಾಗೂ ನಗರ ಪ್ರದೇಶಗಳ ಬಡ ವಿದ್ಯಾರ್ಥಿಗಳಿಗೆ ಮಾರಕವಾಗಲಿದೆ. ಈ ಯೋಜನೆಯಡಿ ಸುತ್ತಮುತ್ತಲಿನ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಪ್ರೌಢಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊ ಳಿಸುವ ಪ್ರಕ್ರಿಯೆ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಆರೋಪಿಸಿದರು. ಜಿಲ್ಲೆಯಲ್ಲಿ ಅಮರಾವತಿ, ಚಿಕ್ಕಹೇಸರೂರು, ಹಿರೇಹೇಸರೂರು, ಅನ್ವರಿ, ಗುರುಗುಂಟ, ದೇವಸಗೂರು ಜನತಾ ಕಾಲೋನಿ, ಜೆ.ಮಲ್ಲಾಪುರ, ಅಲ್ನೋಡ ತಾಂಡಾ, ಗಿಲ್ಲೆಸಗೂರು ಸಮೀಪದ ಮಲ್ಲಿಕಾರ್ಜುನ ನಗರ, ಪಂಚಮುಖಿ ಗಣಧಾಳ ಪ್ರೌಢಶಾಲೆ, ಗೌಸ್ ನಗರ, ಮಾನ್ವಿ ತಾಲೂಕಿನ ಬಲ್ಲಟಗಿ ತಾಂಡಾ ಸೇರಿದಂತೆ ಹಲವು ಶಾಲೆಗಳು ವಿಲೀನದ ಭೀತಿಯಲ್ಲಿವೆ.
ಈ ಶಾಲೆಗಳನ್ನು ಮುಚ್ಚಿದರೆ ಸಣ್ಣ ಮಕ್ಕಳು ಹಾಗೂ ಬಡ ಕುಟುಂಬಗಳ ವಿದ್ಯಾರ್ಥಿಗಳು ದೂರದ ಶಾಲೆಗಳಿಗೆ ತೆರಳಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಇದರಿಂದ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಶಿಕ್ಷಣದ ಹಕ್ಕಿಗೆ ಧಕ್ಕೆ ಉಂಟಾಗಲಿದೆ ಎಂದು ದೂರಿದರು.
ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಯೋಜನೆಯನ್ನು ಹಿಂಪಡೆಯಬೇಕು.ಸರ್ಕಾರಿ ಶಾಲೆಗಳ ವಿಲೀನ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಖಾಲಿ ಇರುವ 5,624 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಮನವಿ ಮಾಡಿದರು.
266 ಏಕೋಪಾಧ್ಯಾಯ ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರನ್ನು ನೇಮಕ ಮಾಡಬೇಕು.ಹಾಳಾಗಿರುವ 874 ಶೌಚಾಲಯಗಳನ್ನು ತುರ್ತಾಗಿ ದುರಸ್ತಿಗೊಳಿಸಿ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲೆಯ ಯಾವುದೇ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯನ್ನು ಮುಚ್ಚಬಾರದು ಅಥವಾ ವಿಲೀನಗೊಳಿಸಬಾರದು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾಧ್ಯಕ್ಷ ಭುಜಪ್ಪ, ಸದಸ್ಯರಾದ ರಂಗನಾಥ, ವೀರಭದ್ರಯ್ಯ, ಮಹೇಂದ್ರ ಸಿಂಗ್, ಅಣ್ಣಪ್ಪ, ಚನ್ನಬಸವ ಜಾನೇಕಲ್, ಮಹೇಶ್, ವೀರೇಶ್, ಗಾಣದಾಳ ಗ್ರಾಮದ ರಂಗೇಶ್, ನಾಗರಾಜ್ ನಾಯಕ, ಸತ್ಯಪ್ಪ, ಜಿ. ಹನುಮಂತು, ನಜೀರ್ ಸಾಬ್, ನರಸಣ್ಣ, ಗೋವಿಂದಪ್ಪ, ಸಿ. ಮಲ್ಲೇಶ್, ಲಕ್ಷ್ಮಿಪತಿ, ಅಶೋಕ್, ಬಸವರಾಜ್, ಮಲ್ಲಾಪುರದ ಜಗದೀಶ್ , ರಾಮು, ರಾಮಣ್ಣ, ಹನುಮಂತ ಸೇರಿ ಅನೇಕರು ಇದ್ದರು.