ನೀಟ್ ಪರೀಕ್ಷೆಯಲ್ಲಾದ ಅವ್ಯವಹಾರಗಳ ಹಿನ್ನೆಲೆಯಲ್ಲಿ ಎನ್‌ಟಿಎ ರದ್ದುಪಡಿಸಲು ಒತ್ತಾಯಿಸಿ ಎಐಟಿಎಸ್‌ಓ ಸಂಘಟನೆಯಿಂದ ರಾಯಚೂರಿನ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಗುರುವಾರ ಪ್ರತಿಭಟನೆ ಮಾಡಿದರು. ರಾಜ್ಯ ಕಾರ್ಯದರ್ಶಿ ಶಿಲ್ಪಾ ಬಿ.ಕೆ., ಜಿಲ್ಲಾ ಕಾರ್ಯದರ್ಶಿ ಬಸವರಾಜ್, ಜಿಲ್ಲಾ ಸಂಘಟನೆಕಾರರಾದ ಅಮೋಘ, ಶಿವಕುಮಾರ್, ಶ್ರೀಕಾಂತ್,ತರುಣ್, ಭಾಗ್ಯಶ್ರೀ, ಪಲ್ಲವಿ,ಜಿಂದವಲ್ಲಿ,ಯಲ್ಲಗೌಡ,ಸೋಫಿಯಾ, ಲಲಿತಾ,ವೀರೇಶ,ಮಂಜುನಾಥ, ಋತುಜಾ ಇದ್ದರು.
ರಾಯಚೂರು
ನೀಟ್ ಪರೀಕ್ಷೆಯಲ್ಲಾದ ಅವ್ಯವಹಾರಗಳ ಹಿನ್ನೆಲೆಯಲ್ಲಿ ಎನ್‌ಟಿಎ ರದ್ದುಪಡಿಸಲು ಒತ್ತಾಯಿಸಿ ಎಐಟಿಎಸ್‌ಓ ಸಂಘಟನೆಯಿಂದ ನಗರದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಗುರುವಾರ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಶಿಲ್ಪಾ ಬಿ.ಕೆ., ಮಾತನಾಡಿ, ಮೇ 3 ರಂದು ನಡೆದ ನೀಟ್ ಯುಜಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಪರಿಣಾಮ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್‌ಟಿಎ ಪ್ರಕಟಿಸಿದೆ. ಇದು ಕೇವಲ ಒಂದು ಪರೀಕ್ಷಾ ಸಂಸ್ಥೆಯ ವೈಫಲ್ಯವಲ್ಲ ,ಇದು ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳ ಬೆವರು ಮತ್ತು ಕನಸುಗಳ ಮೇಲೆ ನಡೆದ ಅನ್ಯಾಯವಾಗಿದೆ.
ಕೇವಲ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ, ವೈದ್ಯಕೀಯ ಶಿಕ್ಷಣದ ಕನಸು ಹೊತ್ತವರ ಆಶೋತ್ತರಗಳಿಗೆ ಧಕ್ಕೆಯುಂಟಾಗಿದೆ. ಈ ಪ್ರಕರಣಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ದೇಶದ ಜನರ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಈ ವೈಫಲ್ಯವು ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಮತ್ತು ಹತಾಶೆಯನ್ನು ಮೂಡಿಸಿದೆ. ಆದ್ದರಿಂದ ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರಕ್ಕೆ ದೂಡಿರುವ ಎನ್.ಟಿ.ಎಯನ್ನು ರದ್ದುಪಡಿಸಲು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ಬಸವರಾಜ್ ಮಾತನಾಡಿ, ಪಾರದರ್ಶಕವಾಗಿ ಮತ್ತು ಸುರಕ್ಷಿತವಾಗಿ ಪರೀಕ್ಷೆಗಳನ್ನು ನಡೆಸುವಲ್ಲಿ ಪದೇ ಪದೇ ವಿಫಲವಾಗಿ ದೇಶದ ನಂಬಿಕೆಯನ್ನು ಕಳೆದುಕೊಂಡಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಪ್ರಶ್ನೆಪತ್ರಿಕೆ ಸೋರಿಕೆಯ ಹಿಂದೆ ಇರುವ ವ್ಯಕ್ತಿಗಳು ಮತ್ತು ಕೋಚಿಂಗ್ ಮಾಫಿಯಾವನ್ನು ಪತ್ತೆಹಚ್ಚಲು ಉನ್ನತ ಮಟ್ಟದ ಸ್ವತಂತ್ರ ನ್ಯಾಯಾಂಗ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥರಿಗೆ ನಿದರ್ಶನೀಯ ಶಿಕ್ಷೆಯಾಗಬೇಕು. ಹಾಗೆಯೇ ಪ್ರವೇಶ ಪರೀಕ್ಷಾ ಪದ್ಧತಿಯನ್ನು ಸಮೂಲಾಗ್ರವಾಗಿ ಬದಲಿಸಿ, ಅದು ಸಾಮಾನ್ಯರಿಗೂ ಲಭ್ಯವಿರುವಂತೆ, ಪಾರದರ್ಶಕವಾಗಿ ಮತ್ತು ಖಾಸಗಿ ವಾಣಿಜ್ಯ ಹಿತಾಸಕ್ತಿಗಳಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನೆಕಾರರಾದ ಅಮೋಘ, ಶಿವಕುಮಾರ್, ಶ್ರೀಕಾಂತ್,ತರುಣ್, ಭಾಗ್ಯಶ್ರೀ,ಪಲ್ಲವಿ,ಜಿಂದವಲ್ಲಿ,ಯಲ್ಲಗೌಡ,ಸೋಫಿಯಾ, ಲಲಿತಾ,ವೀರೇಶ,ಮಂಜುನಾಥ, ಋತುಜಾ ಸೇರಿ ಅನೇಕರು ಇದ್ದರು.