ಮಂತ್ರಾಲಯ ಮಠಕ್ಕೆ ಬುಧವಾರ ಭೇಟಿ ನೀಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಗೌರವಿಸಿ ಅಶೀರ್ವದಿಸಿದರು. ಪ್ರಗತಿ ಶೆಟ್ಟಿ, ಮಕ್ಕಳಾದ ರನ್ವಿತ್ ಶೆಟ್ಟಿ ಇದ್ದರು. 
ರಾಯಚೂರು

ಶ್ರೀಮಠಕ್ಕೆ ನಟ ರಿಷಬ್ ಶೆಟ್ಟಿ ಭೇಟಿ

ರಾಚಯ್ಯ ಸ್ವಾಮಿ
ರಾಯಚೂರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಬುಧವಾರ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬೆಳಗ್ಗೆ ಮಂತ್ರಾಲಯಕ್ಕೆ ಆಗಮಿಸಿದ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಹಾಗೂ ಮಕ್ಕಳು, ಮೊದಲು ಗ್ರಾಮ ದೇವತೆ ಮಂಚಾಲಮ್ಮ ದೇವಿಯ ದರ್ಶನ ಪಡೆದರು. ನಂತರ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಪಡೆದರು.
ನಂತರ ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಅವರು ರಿಷಬ್ ಶೆಟ್ಟಿ ದಂಪತಿಯನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಕೆಲಕಾಲ ಶ್ರೀಗಳೊಂದಿಗೆ ಆಪ್ತ ಸಮಾಲೋಚನೆ ನಡೆಸಿದ ರಿಷಬ್ ಶೆಟ್ಟಿ, ಮಠದ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು. ನೆಚ್ಚಿನ ನಟನನ್ನು ನೋಡಲು ಮಠದ ಆವರಣದಲ್ಲಿ ಭಕ್ತರು ಮುಗಿಬಿದ್ದಿದ್ದು ಕಂಡುಬಂದಿತು.