ವೆಂಕಟರಾವ ನಾಡಗೌಡ 
ರಾಯಚೂರು

ಮಳೆಗಾಗಿ ಅಂಬಾಮಠಕ್ಕೆ ಪಾದಯಾತ್ರೆ 14ರಂದು

ಸಿಂಧನೂರು: ಮಳೆಗಾಗಿ ಪ್ರಾರ್ಥಿಸಿ ಜು. 14ರಂದು ಬೆಳಗ್ಗೆ 8 ಗಂಟೆಗೆ ನಗರದ ಕೋಟೆ ಈರಣ್ಣ ದೇವಸ್ಥಾನದಿಂದ ಸುಕ್ಷೇತ್ರ ಸಿದ್ಧಪರ್ವತ ಅಂಬಾಮಠದ ಅಂಬಾದೇವಿ ದೇವಸ್ಥಾನಕ್ಕೆ ಜೆಡಿಎಸ್‌ನಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ವೆಂಕಟರಾವ ನಾಡಗೌಡ ಹೇಳಿದರು. 
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ನಗರದಿಂದ ಇ.ಜೆ.ಹೊಸಳ್ಳಿ, ಅಮರಾಪುರ, ಸಾಸಲಮರಿ, ರೌಡಕುಂದಾ ಸೇರಿ ವಿವಿಧ ಗ್ರಾಮಗಳ ಮೂಲಕ ಸುಕ್ಷೇತ್ರ ಅಂಬಾಮಠ ತಲುಪಲಾಗುವುದು. ಪಾದಯಾತ್ರೆ ಹಾಗೂ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ದೇವದುರ್ಗ ಶಾಸಕಿ ಕರಿಯಮ್ಮ, ಮಾನ್ವಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಗೂ ಪಕ್ಷದ ಮುಖಂಡರು ಭಾಗವಹಿಸುವರು ಎಂದು ತಿಳಿಸಿದರು.  
ಜೋಳ ಖರೀದಿಸಿದ ಸರ್ಕಾರ ಬಾಕಿಯಿರುವ 282.70 ಕೋಟಿ ರೂ.ಯನ್ನು ರೈತರ ಖಾತೆಗಳಿಗೆ ಕೂಡಲೇ ಜಮಾ ಮಾಡಬೇಕು.     ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ತೊಗರಿ, ಸೂರ್ಯಕಾಂತಿ ಹಾಗೂ ಹತ್ತಿ ಬೆಳೆ ಬೆಳೆದಿದ್ದು, ಮಳೆಯಿಲ್ಲದೆ ಒಣಗಿವೆ. ಹಾಗಾಗಿ ಸರ್ಕಾರ ಪಾರದರ್ಶಕವಾಗಿ ಬೆಳೆ ಹಾನಿ ಸರ್ವೇ ನಡೆಸಿ ಎಕರೆಗೆ 25 ಸಾವಿರ ರೂ. ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದ ಅವರು, ಎಂಎಲ್ಸಿ ಬಸನಗೌಡ ಬಾದರ್ಲಿ ಅವರು ಸ್ವಯಂಪ್ರೇರಣೆಯಿಂದ ವಿತರಣಾ ಕಾಲುವೆಗಳ ಸ್ವಚ್ಛತೆಗೆ ಮುಂದಾಗಿರುವುದು ಸ್ವಾಗತಾರ್ಹ ಎಂದರು. 
ಪ್ರಮುಖರಾದ ಅಶೋಕಗೌಡ ಗದ್ರಟಗಿ, ಸತ್ಯನಾರಾಯಣ, ಧರ್ಮನಗೌಡ ಮಲ್ಕಾಪುರ, ಎಸ್.ಬಿ.ಟೇಲರ್, ವೆಂಕೋಬಣ್ಣ ಕಲ್ಲೂರು, ಸುಮಿತ್ ತಡಕಲ್, ರವಿಗೌಡ ಪನ್ನೂರು, ಸೈಯದ್ ಆಸೀಫ್ ಇದ್ದರು.