ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ದಿ ಹೋರಾಟ ಸಮಿತಿ ಸಂಸ್ಥಾಪಕ ರಾಘವೇಂದ್ರ ಕುಷ್ಟಗಿ
ರಾಯಚೂರು ರಾಜ್ಯದಲ್ಲಿ ನೂತನವಾಗಿರಚಿಸಲಾಗಿರುವ ಸಚಿವ ಸಂಪುಟದಲ್ಲಿ ನಂಜುಂಡಪ್ಪ ಸಮಿತಿ ಶಿಫಾರಸ್ಸಿನಂತೆ ಶೇ.25 ರಷ್ಟು ಸಚಿವ ಸ್ಥಾನ ಕಲ್ಯಾಣ ಕರ್ನಾಟಕ ಭಾಗದ ಶಾಸಕರಿಗೆ ನೀಡಬೇಕು. ಜತೆಗೆ ವಿಶೇಷ ನೇಮಕಾತಿ ಪ್ರಾಧಿಕಾರ ಸ್ಥಾಪಿಸಬೇಕೆಂದು ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ದಿ ಹೋರಾಟ ಸಮಿತಿ ಸಂಸ್ಥಾಪಕ ರಾಘವೇಂದ್ರ ಕುಷ್ಟಗಿ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವುಕುಮಾರ ಸೇರಿ 14 ಜನರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 8 ಸಚಿವ ಸ್ಥಾನಗಳು ಈ ಭಾಗಕ್ಕೆ ನೀಡಬೇಕಿದೆ. ಆದರೆ ಕಲಬುರಗಿಗೆ ಇಬ್ಬರು, ಬೀದರನ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಸೇರಿದಂತೆ ಏಳು ಜಿಲ್ಲೆಗಳ ಒಬ್ಬ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದರು. ನಿಗಮ ಮಂಡಳಿ, ವಿವಿಧ ಪ್ರಶಸ್ತಿಗಳಿಗೂ ಶೇ.25 ಸ್ಥಾನಗಳನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಬೇಕು ಎಂದರು.
ನುಡಿದಂತೆ ನಡೆಯುದಾದರೆ ಸಚಿವಾಲಯಕ್ಕೆ ಸಚಿವರನ್ನಾಗಿ ನೇಮಿಸಬೇಕು. ಕಲಬುರಗಿ ಜಿಲ್ಲೆಗೆ ಮಾತ್ರ ಅಧಿಕಾರ ಸೀಮಿತವಾಗಿಸದೇ ಎಲ್ಲಾ ಜಿಲ್ಲೆಗಳಿಗೂ ಉಸ್ತುವಾರಿ ಸಚಿವರನ್ನಾಗಿಸಬೇಕು. ರಾಯಚೂರಿನವರಿಗೆ ಸಚಿವ ಸ್ಥಾನ ನೀಡಿ ಉಸ್ತುವಾರಿಗಳನ್ನಾಗಿಸಬೇಕೆಂದರು. ಬಿಜೆಪಿ ಅಧಿಕಾರ ಅವಧಿಯೂ ಸೇರಿದಂತೆ ಬೇರೆ ಜಿಲ್ಲೆಯವರು ಉಸ್ತುವಾರಿ ಸಚಿವರನ್ನಾಗಿಸುವ ಪರಿಪಾಠವನ್ನು ನಿಲ್ಲಿಸಿ ಸ್ಥಳೀಯರಿಗೆ ಸಚಿವ ಸ್ಥಾನ ನೀಡಿ ಉಸ್ತುವಾರಿ ಸಚಿವರನ್ನಾಗಿಸಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ ಗಂಜಿ ಕೇಂದ್ರವನ್ನಾಗಿಸದೇ ಅಭಿವೃದ್ಧಿ ಬೇಕಾದ ಅನುದಾನ, ಹಣಕಾಸಿನ ಸದ್ಬಳಕೆಯಬದ್ಧತೆ ತೋರಿಸಬೇಕಿದೆ.
30 ಸಾವಿರ ಶಿಕ್ಷಕರ ಹುದ್ದೆಗಳು ಈ ಭಾಗದಲ್ಲಿ ಖಾಲಿಯಿವೆ, ಆರೋಗ್ಯ ಇಲಾಖೆಯಲ್ಲಿ ವೈಧ್ಯರು ಸೇರಿದಂತೆ ವೈದ್ಯಕೀಯೇತರ ಹುದ್ದೆಗಳು ಖಾಲಿಯಾಗಿವೆ. ಕೆಕೆಆರ್‌ಡಿಬಿಯಿಂದ ಪ್ರತ್ಯೇಕ ನೇಮಕಾತಿ ಪ್ರಾಧಿಕಾರ ಸ್ಥಾಪಿಸಿ ನೇಮಕಾತಿ ನಡೆಸಬೇಕು. ಇತ್ತೀಚಿಗೆ ಏಳೂ ಜಿಲ್ಲೆಗಳಲ್ಲಿಯೂ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಸರ್ಕಾರ ಸ್ಪಂದಿಸದೇ ಹೋದರೆ ಸಾರ್ವಜನಿಕರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಡಾ.ಶಾರದ ಹುಲಿನಾಯಕ, ಜಾನ್‌ವೆಸ್ಲಿ ,ಬಿ.ಬಸವರಾಜ ಕವಿತಾ,ಹರವಿ ನಾಗನಗೌಡ ಇದ್ದರು.