ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ಹರಿದುಬಂದ ಭಕ್ತ ಸಾಗರದ ನೋಟ. 
ರಾಯಚೂರು

ರಾಯರ ಕ್ಷೇತ್ರದಲ್ಲಿ ಭಕ್ತ ಸಾಗರದ ಸಂಭ್ರಮ

ಪ್ರಮುಖ ಮುಖ್ಯಾಂಶಗಳು

  • ರಾಯರ ಕ್ಷೇತ್ರದಲ್ಲಿ ಭಕ್ತ ಸಾಗರದ ಸಂಭ್ರಮ
  • ಬೃಂದಾವನ ದರ್ಶನಕ್ಕೆ ಕಾಯುವಿಕೆ,
  • ಭಕ್ತರ ನಿಭಾಯಿಸಲು ಶ್ರೀಮಠದ ಹರಸಾಹಸ

ರಾಯಚೂರು ಮಂತ್ರಾಲಯದ ಶ್ರೀ ರಾಯರ ದರ್ಶನಕ್ಕೆ ಸಾಮಾನ್ಯವಾಗಿ ಬೇಸಿಗೆ ರಜೆ ದಿನಗಳಲ್ಲಿ ಲಕ್ಷ ಸಂಖ್ಯೆಯ ಭಕ್ತರು ಭೇಟಿ ನೀಡುವುದು ರೂಢಿ. ಆದರೆ ಇದೀಗ ರಜೆ ದಿನಗಳ ನಂತರವೂ ಭಕ್ತರು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.
ಕ್ರಿಸ್ ಮಸ್ ರಜೆ ನಿಮಿತ್ತ ಗುರುವಾರ ಶ್ರೀಮಠಕ್ಕೆ ಒಂದೇ ದಿನದಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದರಿಂದ ಭಕ್ತರಿಗೆ ಸೌಲಭ್ಯ ಒದಗಿಸಲು ಶ್ರೀಮಠ ಹರಸಾಹಸ ಪಡುವಂತಾಗಿದೆ.

ಶ್ರೀ ಗುರುಸಾರ್ವಭೌಮರ ಆರಾಧನೆ ವೇಳೆ ಹಾಗೂ ವಿಶೇಷ ಉತ್ಸವ, ಹಬ್ಬದ ಸಂದರ್ಭದಲ್ಲಿ ಮಂತ್ರಾಲಯದಲ್ಲಿ ಭಕ್ತರ ಸಂಖ್ಯೆ ಲಕ್ಷ ದಾಟುತ್ತದೆ. ಬೇಸಿಗೆಯ ಶಾಲಾ ಕಾಲೇಜು ರಜೆಯಲ್ಲೂ ಭಕ್ತರು ರಾಯರ ಕ್ಷೇತ್ರಕ್ಕೆ ದೌಡಾಯಿಸುವುದು ಸಹಜ. ಆದರೆ ವಾರದ ರಜೆ ಬಂದರೆ ಸಾಕು ಲಕ್ಷಾಂತರ ಭಕ್ತರು ಭೇಟಿ ನೀಡಿರುವುದು ರಾಯರ ಕ್ಷೇತ್ರದ ಆಕರ್ಷಣೆಗೆ ಸಾಕ್ಷಿಯಾಗಿದೆ.

ಭಕ್ತರ ಪ್ರವಾಹ

ನದಿಯಲ್ಲಿನ ಪ್ರವಾಹ ಕಂಡಿದ್ದ ಮಂತ್ರಾಲಯ ಶ್ರೀ ಕ್ಷೇತ್ರದಲ್ಲಿ ಸಾಮಾನ್ಯವಾಗಿ ರಾಯರ ಆರಾಧನೆಯ ಸಂದರ್ಭದಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸುವುದು ರೂಢಿ. ಆದರೆ, ಇತ್ತಿಚ್ಚಿನ ದಿನಗಳಲ್ಲಿ ರಜೆಗಳು ಬಂದರೆ ಸಾಕು ಬೆಂಗಳೂರು, ಮೈಸೂರು, ಹಾಸನ ಸೇರಿ ದೇಶದ ಮೂಲೆಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ.
ಗುರುವಾರ ಬೆಳ್ಳಂಬೆಳಗ್ಗೆ ಧಾವಿಸಿದ ಭಕ್ತರ ಮಹಾಪೂರವು ತುಂಗಭದ್ರಾ ನದಿಯಲ್ಲಿ ಮಿಂದೆದ್ದು, ಶ್ರೀರಾಯರ ದರ್ಶನ ಪಡೆದು ಹರಕೆ ತೀರಿಸುವ ಕೆಲಸ ಮಾಡಿದರು. ಬೃಂದಾವನ ದರ್ಶನಕ್ಕೆ ಅವಕಾಶವಿರುವ ಎಲ್ಲ ಬಾಗಿಲುಗಳನ್ನೂ ತೆರೆದು ಮಠದ ಆಡಳಿತ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿತು. ಪರಿಣಾಮ ಭಕ್ತರು ಸಾಲಾಗಿ ನಿಂತು ಗ್ರಾಮದೇವತೆ ಶ್ರೀಮಂಚಾಲೆಮ್ಮದೇವಿ ದರ್ಶನ ಆನಂತರದಲ್ಲಿ ಶ್ರೀರಾಯರ ಮೂಲ ಬೃಂದಾವನದ ದರ್ಶನ ಪಡೆದರು.

ಮಂತ್ರಾಲಯ ಭರ್ತಿ

ಪ್ರತಿ ಭಾರಿ ಆರಾಧನೆ ಮತ್ತು ಹಬ್ಬದ ದಿನಗಳ ಸಂದರ್ಭ ಮಂತ್ರಾಲಯದಲ್ಲಿ ಭಾರೀ ಸಂಖ್ಯೆಯಲ್ಲಿ ಜನತೆ ಕ್ಷೆತ್ರಕ್ಕೆ ಆಗಮಿಸಿದ್ದಾರೆ. ಆದರೆ ಮಕ್ಕಳ ಶಾಲೆಗಳು ಪ್ರಾರಂಭವಾಗಿದ್ದು, ಮಳೆಯು ಜೋರಾಗಿದ್ದರು ಸಹ ಸಂಖ್ಯೆ ಮಾತ್ರ ಕಡಿಮೆಯಾಗದೆ ಇರುವುದರಿಂದ ಶ್ರೀಮಠದಲ್ಲಿ ವಸತಿ ಮತ್ತಿತರೆ ಸೌಲಭ್ಯ ಒದಗಿಸುವುದು ಮಠದ ಆಡಳಿತಕ್ಕೆ ಕಷ್ಟವಾಗುತ್ತದೆ. ಆದರೆ ಭಕ್ತರಿಗೆ ರಾಯರ ಕ್ಷೇತ್ರಕ್ಕೆ ಭೇಟಿ ನೀಡುವುದೊಂದೇ ಗುರಿಯಾಗುವುದರಿಂದ ದಿನವೂ 50 ರಿಂದ 1 ಲಕ್ಷ ಜನ ಭಕ್ತರು ರಾಯರ ದರ್ಶನಕ್ಕೆ ಧಾವಿಸುತ್ತಿದ್ದಾರೆ. ಹೀಗೆ ರಾಯರ ಕ್ಷೆತ್ರಕ್ಕೆ ಆಗಮಿಸುವವರು ಹುಂಡಿಯಲ್ಲಿ ಕಾಣಿಕೆ ಸಲ್ಲಿಸುವ ಮೂಲಕ ಹರಕೆ ತೀರಿಸುತ್ತಿದ್ದು, ಕಾಣಿಕೆಯ ಮೊತ್ತ ಪ್ರತಿ ತಿಂಗಳು ದಾಖಲೆಯ ಮಟ್ಟಕ್ಕೆ ಸಂಗ್ರಹವಾಗುತ್ತಿದೆ.
ತಿಂಗಳ ಕೊನೆಯಲ್ಲಿ ಕ್ರಿಸ್ ಮಸ್ ಹಬ್ಬ , 4ನೇ ಶನಿವಾರ ಹಾಗೂ ಭಾನುವಾರ ಇರುವುದರಿಂದ ಭಕ್ತದಿಗಳು ವಾರದ ಹಿಂದೆಯೇ ಮಂತ್ರಾಲಯದ ಯಾತ್ರಿನಿವಾಸಗಳು, ದಾನಿಗಳ ವಸತಿಗೃಹಗಳು ಹಾಗೂ ಖಾಸಗಿ ಲಾಡ್ಜ್‌ಗಳು ಬುಕ್ ಮಾಡಿಕೊಂಡಿದ್ದಾರೆ. ಆದರಿಂದ ಶ್ರೀಮಠದ ರೂಮ್‌ಗಳು ಭರ್ತಿಯಾಗಿದ್ದರಿಂದ ಶ್ರೀಮಠದಿಂದ ಡಿಸೆಂಬರ್ 23 ರಿಂದ 2026ರ ಜನವರಿ 15 ರವರೆಗೆ ಯಾವುದೇ ಮಠದ ರೂಮ್‌ಗಳು ಲಭ್ಯವಿರುವುದರಿಲ್ಲವೆಂದು ಶ್ರೀಮಠ ತಿಳಿಸಿದ್ದರಿಂದ ಬುಕ್ ಮಾಡದೇ ನೇರವಾಗಿ ಬೆಂಗಳೂರು ಸೇರಿ ವಿವಿಧ ನಗರಗಳಿಂದ ಬಂದ ನೂರಾರು ಭಕ್ತರಿಗೆ ಗುರುವಾರ ವಸತಿ ಸಮಸ್ಯೆ ಅನುಭವಿಸಬೇಕಾಯಿತು. ಮಂತ್ರಾಲಯದಲ್ಲಿ ವಸತಿ ವ್ಯವಸ್ಥೆ ಆಗದ ಕಾರಣ ಅನೇಕ ಭಕ್ತರು ರಾಯಚೂರಿಗೆ ಬಂದು ಲಾಡ್ಜ್‌ಗಳಲ್ಲಿ ವಾಸ್ತವ್ಯ ಮಾಡಿ ನಂತರ ಮಂತ್ರಾಲಯ ಮಠಕ್ಕೆ ತೆರಳಿ ರಾಯರ ದರ್ಶನ ಪಡೆದರು.
ಪ್ರಸಾದ ಖರೀದಿಸಲು ಸಹ ಭಕ್ತರು ಪ್ರಯಾಸಯ ಪಡಬೇಕಾಯಿತು. ಇಲ್ಲಿನ ವ್ಯಾಪಾರ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿಯೇ ನಡೆಯಿತು.