ಮಸ್ಕಿಯಯಲ್ಲಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು. ಡಾ.ಚನ್ನಮಲ್ಲಸ್ವಾಮೀಜಿ, ಬಸವಪ್ರಸಾದ ಸ್ವಾಮೀಜಿ, ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಪ್ರಮುಖರಾದ ಸೂಗಣ್ಣ ಬಾಳೆಕಾಯಿ, ವೀರೇಶ ಪಾಟೀಲ್, ಪ್ರಸನ್ನ ಪಾಟೀಲ್ ಇತರರಿದ್ದರು.
ಮಸ್ಕಿ: ತ್ರಿವಿಧ ದಾಸೋಹ ಮೂರ್ತಿಯಾದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಗಳು ಅಕ್ಷರ, ಅನ್ನ, ಆಶ್ರಯ ನೀಡಿ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು ಎಂದು ಮೆದಕಿನಾಳ ಚನ್ನಮಲ್ಲತಾತ ಮಠದ ಡಾ.ಚನ್ನಮಲ್ಲ ಸ್ವಾಮೀಜಿ ಹೇಳಿದರು.
ಪಟ್ಟಣದ ದೈವದಕಟ್ಟೆಯ ಹತ್ತಿರ ಡಿ.ಕೆ.ಸರ್ಕಲ್ ಗೆಳೆಯರ ಬಳಗ ಹಾಗೂ ಭಕ್ತರಿಂದ ಬುಧವಾರ ಸಂಜೆ ಏರ್ಪಡಿಸಿದ್ದ ಸಿದ್ಧಗಂಗಾಮಠದ ಡಾ.ಶಿವಕುಮಾರ ಶ್ರೀಗಳ 7ನೇ ವರ್ಷದ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಇರಕಲ್ ಶಿವಶಕ್ತಿ ಪೀಠದ ಬಸವಪ್ರಸಾದ ಸ್ವಾಮೀಜಿ ಮಾತನಾಡಿ, ದೇಶ ಕಂಡ ಮಹಾಸಂತ, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಶ್ರೀಗಳು ಬಡವ ಬಲ್ಲಿದ ಎಂಬ ಭೇದ ಭಾವ ಮಾಡದೆ ಎಲ್ಲರನ್ನೂ ಸಮಾನವಾಗಿ ಕಂಡು ಸಮಾಜದ ಹಿತಕ್ಕಾಗಿ ಹಗಲಿರುಳು ಶ್ರಮಿಸಿದ ಆಧುನಿಕ ಸಂತರು ಎಂದರು.
ಶಾಸಕ ಆರ್.ಬಸನಗೌಡ ತುರ್ವಿಹಾಳ ಮಾತನಾಡಿ, ಶಿವಕುಮಾರ ಸ್ವಾಮಿಗಳು ಶಿಕ್ಷಣ ಹಾಗೂ ಸಾಮಾಜಿಕ ಪರಿವರ್ತನೆಯ ಕೆಲಸದಲ್ಲಿ ಅಗಾಧವಾಗಿ ಸೇವೆ ಸಲ್ಲಿಸಿದರು. ಪ್ರಪಂಚದ ಉದ್ದಗಲಕ್ಕೂ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಸಿದ್ಧಗಂಗಾ ಮಠದಲ್ಲಿ ಎಲ್ಲ ವರ್ಗದ ಸಾವಿರಾರು ಬಡ, ಅನಾಥ ಮಕ್ಕಳಿಗೆ ಶಿಕ್ಷಣ ಹಾಗೂ ಆಶ್ರಯ ನೀಡಲಾಗಿದೆ. ಇದರಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿದೆ. ಇದು ಸಮಾಜದಲ್ಲಿ ಬಹುದೊಡ್ಡ ಕ್ರಾಂತಿಯಾಗಿದೆ ಎಂದರು. ಐದು ಸಾವಿರ ಜನ ದಾಸೋಹದಲ್ಲಿ ಪ್ರಸಾದ ಸ್ವೀಕರಿಸಿದರು.
ತಹಸೀಲ್ದಾರ್ ಮಂಜುನಾಥ ಭೋಗಾವತಿ, ಸಿಪಿಐ ರಾಮಪ್ಪ ಜಲಗೇರಿ, ಪುರಸಭೆ ಅಧ್ಯಕ್ಷ ಸುರೇಶ ಹರಸೂರು, ಪ್ರಮುಖರಾದ ಮಹಾದೇವಪ್ಪಗೌಡ, ಮಲ್ಲಪ್ಪ ಕುಡತಿನಿ, ಷಡಕ್ಷರಪ್ಪ ಬಾಳೇಕಾಯಿ, ಪಂಪಣ್ಣ ಗುಂಡಳ್ಳಿ, ಅಶೋಕ ಠಾಕೂರ, ಘನಮಠದಯ್ಯ ಸಾಲಿಮಠ, ವೀರೇಶ ಪಾಟೀಲ್, ಸೂಗಣ್ಣ ಬಾಳೇಕಾಯಿ, ಮಂಜುನಾಥ ಮಾಟೂರು, ಶರಣಬಸವ ಎಲಿಗಾರ, ಸತ್ಯನಾರಾಯಣ ಇಲ್ಲೂರು, ಶರಣಬಸವ ಸೊಪ್ಪಿಮಠ, ಮೌನೇಶ ನಾಯಕ, ಸುರೇಶ ಪಲ್ಲೆದ, ಶಿವರಾಜ ಪ್ಯಾಟಾಳ, ಪಂಪಣ್ಣ ನಂದಾ, ವೀರೇಶ ಇತರರಿದ್ದರು.
ಮೆರವಣಿಗೆ: ಶತಮಾನದ ಸಂತ ಡಾ.ಶಿವಕುಮಾರ ಸ್ವಾಮೀಜಿ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಅಲಂಕೃತಗೊಂಡ ಮಂಟಪದಲ್ಲಿ ಪ್ರತಿಷ್ಠಾಪಿಸಿ ದೈವದಕಟ್ಟೆಯಿಂದ ಆರಂಭವಾದ ಮೆರವಣಿಗೆ ಮೇನ್ ಬಜಾರ್, ಹಳೇ ಬಸ್‌ನಿಲ್ದಾಣ, ಕನಕವೃತ್ತ, ತೇರಿನ ಮನೆ ಮೂಲಕ ಮರಳಿ ದೈವದಕಟ್ಟೆಗೆ ತಲುಪಿ ಸಮಾಪ್ತಿಗೊಂಡಿತು.