ಜಾಲಹಳ್ಳಿಯಲ್ಲಿ ರಾಜ್ಯ ಹೆದ್ದಾರಿ ಮೇಲೆ ಮಳೆ ನೀರು ನಿಂತಿರುವುದು. 
ರಾಯಚೂರು

ಬಿಸಿಲಿನ ಬೇಗೆಗೆ ತಂಪೆರೆದ ಮಳೆರಾಯ

ದೇವದುರ್ಗ: ತಾಲೂಕಿನ ಜಾಲಹಳ್ಳಿ ವ್ಯಾಪ್ತಿಯಲ್ಲಿ ಶುಕ್ರವಾರ ಉತ್ತಮ ಮಳೆ ಸುರಿದಿದ್ದು, ಬಿಸಿಲಿನ ಬೇಗೆಯಿಂದ ಬಳಲಿದ ಜನರಿಗೆ ತಂಪೆರೆದಂತಾಗಿದೆ. ಮಳೆಯಿಂದ ವಾತಾವರಣದಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿದೆ.
ಕೆಲ ದಿನಗಳಿಂದ ಸುಡುವ ಬಿಸಿಲಿನಿಂದ ಜನರು ರೋಸಿ ಹೋಗಿದ್ದರು. ಶುಕ್ರವಾರ ಗುಡುಗು, ಮಿಂಚು, ಗಾಳಿ ಸಮೇತವಾಗಿ ಮಳೆ ಸುರಿಯಿತು. ಉತ್ತಮ ಮಳೆಯಿಂದ ಜನರು ಹಾಗೂ ರೈತರಲ್ಲಿ ಸಂತಸ ಉಂಟು ಮಾಡಿದೆ. ಉತ್ತಮ ಮಳೆ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಲಿದೆ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಹಲವು ಕಡೆಗಳಲ್ಲಿ ಮಳೆ ಗಾಳಿಗೆ ವಿದ್ಯುತ್ ಕಂಬ ಬಾಗಿದ್ದರೆ, ಮರಗಳು ಧರೆಗುರುಳಿವೆ.
ಬಿಸಿಲಿನ ಬೇಗೆಯಿಂದ ಕಾದಿದ್ದ ವಾತಾವರಣಕ್ಕೆ ಮಳೆಯು ತಂಪಾದ ಸಿಂಚನ ನೀಡಿದೆ. ಜಾಲಹಳ್ಳಿಯ ಕಲ್ಮಲಾ-ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ ಚರಂಡಿಗಳಲ್ಲಿ ಹೂಳು ತೆಗೆಯದ ಕಾರಣ ರಸ್ತೆಗೆ ಹರಿದು ಸಂಚಾರಕ್ಕೆ ತೊಂದರೆ ಉಂಟಾಯಿತು. 
ರಸ್ತೆ ಪಕ್ಕದಲ್ಲಿರುವ ವಿವಿಧ ವಾಣಿಜ್ಯ ಅಂಗಡಿಗಳ ಮಾಲೀಕರು ಚರಂಡಿಗಳ ಮೇಲೆ ಮಣ್ಣು ಹಾಕಿ ಮಳೆ ನೀರು ಚರಂಡಿಯಲ್ಲಿ ಹೋಗದಂತೆ ಮಾಡಿದ್ದಾರೆ. ಅಲ್ಲದೆ ಪಟ್ಟಣದ ಕೆಲ ಲೇಔಟ್‌ಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಹಲವು ಕಡೆ ಸಂಗ್ರಹವಾಗಿರುವುದು ಕಂಡಬಂತು. ಇದರಿಂದ ಜನರು ಸಮಸ್ಯೆ ಎದುರಿಸಿದರು.